ಸಾರಾಂಶ
ಬೆಂಗಳೂರು : ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ‘ರಾಜಲಾಂಛನ ಯುಕ್ತಿ ಸಂಸ್ಥಾನ’ ಹಾಗೂ ‘ದರ್ಪಣ’ ತಂಡದ ಸಹಯೋಗದಲ್ಲಿ ನಡೆಸಿದ ವಿಶೇಷ ತರಗತಿಯಲ್ಲಿ ಪಾಲ್ಗೊಂಡಿದ್ದ 178 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಥವಾ ಅಡ್ಡದಾರಿ ಹಿಡಿಯವು ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಡಿವೈಎಸ್ಪಿ ಎಲ್.ವೈ.ರಾಜೇಶ್ ಅವರು ಕಳೆದ ಮೂರು ವರ್ಷಗಳಿಂದ ‘ರಾಜಲಾಂಛನ ಯುಕ್ತಿ ಸಂಸ್ಥಾನ’ ಹಾಗೂ ‘ದರ್ಪಣ’ ತಂಡದ ಸಹಯೋಗದಲ್ಲಿ ‘ಎಸ್ಸೆಸ್ಸೆಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ’ ನಡೆಸುತ್ತಿದ್ದಾರೆ.
ಅದರಂತೆ ಈ ಬಾರಿ ಮಂಗಮ್ಮನಪಾಳ್ಯ, ಚಂದಾಪುರ, ಆನೇಕಲ್‌ಗಳಲ್ಲಿ ವಿಶೇಷ ತರಗತಿ ನಡೆಸಿದ್ದರು. ಮೂರು ಕಡೆ ನಡೆದ ವಿಶೇಷ ತರಗತಿಯಲ್ಲಿ ಪಾಲ್ಗೊಂಡಿದ್ದ 178 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವಿಶೇಷ ತರಗತಿಗಳಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ ನಿಸ್ವಾರ್ಥದಿಂದ ಪಾಠ ಮಾಡಿದ ಶಿಕ್ಷಕರಿಗೆ ಸನ್ಮಾನ ಮಾಡಿ ಮಾತನಾಡಿದ ಡಿವೈಎಸ್ಪಿ ಎಲ್.ವೈ.ರಾಜೇಶ್, ಒಂದು ವರ್ಷದಲ್ಲಿ ಮಾಡಲಾಗದ ಸಾಧನೆಯನ್ನು ಕೇವಲ ಒಂದು ತಿಂಗಳಲ್ಲಿ ಮಕ್ಕಳು ಮಾಡಿದ್ದಾರೆ. ಮನಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಲಿತು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಉತ್ತೀರ್ಣ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದರು.
ಶುಭೋದಿನಿ ಶಾಲೆಯ ಪ್ರಾಂಶುಪಾಲ ಉಮೇಶ್, ರಾಜಲಾಂಛನ ತಂಡದ ಸದಸ್ಯರಾದ ನರಸಿಂಹಮೂರ್ತಿ, ಡಾ। ವಿಜಯ್, ಮೊಹಮ್ಮದ್ ಇಕ್ಬಾಲ್ ಖಾನ್, ದರ್ಪಣ ತಂಡದ ಸದಸ್ಯರಾದ ಹೇಮಾ, ನಿರಂಜನ್, ಸಾಗರ್ ಉಪಸ್ಥಿತರಿದ್ದರು.