ಸಂಚಾರಿ ನಿಯಮ ಅರಿತು ಕಡ್ಡಾಯ ಪಾಲಿಸಿ: ಸಂಸದೆ

| Published : Jun 25 2025, 12:32 AM IST

ಸಾರಾಂಶ

ವಿದ್ಯಾರ್ಥಿ ಜೀವನ ಬಂಗಾರದಂತೆ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆ, ಸಾಂಸ್ಕೃತಿಕತೆ ಜೊತೆಗೆ ಸಂಚಾರಿ ನಿಯಮವನ್ನು ಸ್ವಯಂಪ್ರೇರಿತವಾಗಿ ಅರಿತು ಪಾಲನೆ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

- ರಸ್ತೆ ಸುರಕ್ಷತೆಗಾಗಿ ವಿದ್ಯಾರ್ಥಿ ಸಂಘ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿ ಜೀವನ ಬಂಗಾರದಂತೆ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆ, ಸಾಂಸ್ಕೃತಿಕತೆ ಜೊತೆಗೆ ಸಂಚಾರಿ ನಿಯಮವನ್ನು ಸ್ವಯಂಪ್ರೇರಿತವಾಗಿ ಅರಿತು ಪಾಲನೆ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತೆಗಾಗಿ ವಿದ್ಯಾರ್ಥಿ ಸಂಘ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಚಾರಿ ನಿಯಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಶಾಲೆಯ ಮಕ್ಕಳನ್ನು ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಎಂದು ನೇಮಕ ಮಾಡಲಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಕೊಳ್ಳಬೇಕು. ಕ್ಯಾಪ್ಟನ್‌ಗಳು ಸಂಚಾರಿ ನಿಯಮಗಳ ಕುರಿತಂತೆ ಎಲ್ಲ ಶಾಲೆಯಲ್ಲಿ ಕರೆಯುವ ಸಭೆಗಳಿಗೆ ಹಾಜರಾಗಿ ನಿಯಮಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು.

ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಮತ್ತು ಪೊಲೀಸ್ ಇಲಾಖೆಗೆ ಕರೆ ಮಾಡಬೇಕೇ ಹೊರತು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವುದರಲ್ಲಿ ಕಾಲಹರಣ ಮಾಡಬಾರದು. ವಿದ್ಯಾರ್ಥಿಗಳು 18 ವರ್ಷ ತುಂಬಿದ ಬಳಿಕ ವಾಹನ ಚಾಲನಾ ಪರವಾನಗಿ ಪಡೆದು, ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು. ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಜೀವ ರಕ್ಷಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, 1977ರಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ದಟ್ಟಣೆಯಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದು ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಹಂತದಿಂದಲೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಹೆಚ್ಚು ಸಹಕಾರಿ ಆಗುತ್ತದೆ ಎಂದ ಅವರು, ಅಪ್ರಾಪ್ತರು ವಾಹನ ಚಾಲನೆ ಮಾಡಿ, ಅಪಘಾತ ಮಾಡಿದರೆ, ₹25 ಸಾವಿರ ದಂಡ ಹಾಗೂ ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದರು.

ಈ ಸಂದರ್ಭ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್ ಬಸಾಪುರ, ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ, ಡಿಡಿಪಿಐ ಜಿ.ಕೊಟ್ರೇಶ್, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- - -

-24ಕೆಡಿವಿಜಿ40.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತೆಗಾಗಿ ವಿದ್ಯಾರ್ಥಿ ಸಂಘ ಆರಂಭೋತ್ಸವ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.