ತೆರಿಗೆ ನಿಯಮಗಳ ಪಾಲನೆ, ರಿಟರ್ನ್ ಸಲ್ಲಿಕೆ ಹಾಗೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕುರಿತು ಸಮರ್ಪಕ ಅರಿವು ಹೊಂದುವುದು ವ್ಯಾಪಾರ ವಲಯಕ್ಕೆ ಅತ್ಯಗತ್ಯವಾಗಿದೆ. ಜಿಎಸ್ಟಿ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು.
ಹುಬ್ಬಳ್ಳಿ:
ಜಿಎಸ್ಟಿ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವ್ಯಾಪಾರಸ್ಥರು ಸರಿಯಾಗಿ ಅರ್ಥಮಾಡಿಕೊಂಡು, ತಮ್ಮ ವ್ಯಾಪಾರ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ಮತ್ತು ಬೆಂಗಳೂರಿನ ಎಂಎಸ್ಸಿ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಅನ್ವೇಷ ಶೆಟ್ಟಿ ಹೇಳಿದರು.ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಇತ್ತೀಚಿನ ಜಿಎಸ್ಟಿ ತಿದ್ದುಪಡಿಗಳಿಂದ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.
ತೆರಿಗೆ ನಿಯಮಗಳ ಪಾಲನೆ, ರಿಟರ್ನ್ ಸಲ್ಲಿಕೆ ಹಾಗೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕುರಿತು ಸಮರ್ಪಕ ಅರಿವು ಹೊಂದುವುದು ವ್ಯಾಪಾರ ವಲಯಕ್ಕೆ ಅತ್ಯಗತ್ಯವಾಗಿದೆ. ಜಿಎಸ್ಟಿ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು. ತೆರಿಗೆ ಸಂಬಂಧಿತ ಸಮಸ್ಯೆಗಳು ಎದುರಾದಾಗ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ವ್ಯವಹಾರದಲ್ಲಿ ತೆರಿಗೆ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಬಳಿಕ ಜಿಎಸ್ಟಿ ತಿದ್ದುಪಡಿಗಳ ಪ್ರಮುಖ ಅಂಶಗಳು, ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಅನ್ವಯಿಸುವ ತೆರಿಗೆ ನಿಯಮ, ರಿಟರ್ನ್ ಸಲ್ಲಿಕೆ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹಾಗೂ ಇ-ಇನ್ವಾಯ್ಸ್ಗೆ ಸಂಬಂಧಿಸಿದ ಬದಲಾವಣೆಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಂದೀಪ ಬಿಡಸಾರಿಯಾ ಮಾತನಾಡಿ, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಸಂಸ್ಥೆ ನಿರಂತರವಾಗಿ ಆಯೋಜಿಸುತ್ತಿದೆ. ಸದಸ್ಯರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ತೆರಿಗೆ ಸಮಿತಿ ಅಧ್ಯಕ್ಷ ಶೇಷಗಿರಿ ಕುಲಕರ್ಣಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರವೀಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ, ಲೆಕ್ಕ ಪರಿಶೋಧಕರಾದ ವಿನಯ ಕುಲಕರ್ಣಿ, ವೈ.ಎಂ. ಖಟಾವಕರ, ಕಪಿಲ ಭಂಡಾರಕರ, ಆನಂದ ಪೋತ್ನೀಸ್, ರವೀಂದ್ರ ಶೆಟ್ಟಿ, ವಿಠ್ಠಲ ಗುತ್ತಿ, ಗುರುರಾಜ ಶೆಟ್ಟಿ ಸೇರಿದಂತೆ ಹಲವರಿದ್ದರು.