ಸಾಹಿತ್ಯ ಅರ್ಥಮಾಡಿಕೊಂಡು ಹಾಡುವುದು ಶ್ರೇಷ್ಠ: ಶಂಕರ ಶಾನುಭಾಗ್

| Published : Oct 07 2024, 01:43 AM IST

ಸಾರಾಂಶ

ಚಿಕ್ಕಮಗಳೂರು, ತತ್ತ್ವಪದ, ಕೀರ್ತನೆ, ಭಜನೆ, ಭಕ್ತಿಗೀತೆ ಸೇರಿದಂತೆ ಸುಗಮ ಸಂಗೀತದಲ್ಲಿ ಸಾಹಿತ್ಯ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಪಾರಿಭಾಷಿಕ ಶಬ್ದಗಳನ್ನು ಅರ್ಥ ಮಾಡಿಕೊಂಡರೆ ಬದುಕು ಸುಂದರ, ಸನಾತನ ಧರ್ಮವನ್ನೂ ಉಳಿಸಬಹುದು ಎಂದು ಗಾಯಕ ಶಂಕರ ಶಾನುಭಾಗ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ವಾರ್ಷಿಕ ಮಲ್ಲಿಗೆ ಪುರಸ್ಕಾರ ಪ್ರದಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತತ್ತ್ವಪದ, ಕೀರ್ತನೆ, ಭಜನೆ, ಭಕ್ತಿಗೀತೆ ಸೇರಿದಂತೆ ಸುಗಮ ಸಂಗೀತದಲ್ಲಿ ಸಾಹಿತ್ಯ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಪಾರಿಭಾಷಿಕ ಶಬ್ದಗಳನ್ನು ಅರ್ಥ ಮಾಡಿಕೊಂಡರೆ ಬದುಕು ಸುಂದರ, ಸನಾತನ ಧರ್ಮವನ್ನೂ ಉಳಿಸಬಹುದು ಎಂದು ಗಾಯಕ ಶಂಕರ ಶಾನುಭಾಗ್ ಹೇಳಿದರು.ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಕಲ್ಕಟ್ಟೆ ಪುಸ್ತಕದ ಮನೆ, ಬೀರೂರು ಮಲ್ಲಿಗೆ ಬಳಗದ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ವಾರ್ಷಿಕ ಮಲ್ಲಿಗೆ ಪುರಸ್ಕಾರವನ್ನು ಖ್ಯಾತ ತಬಲಾ ವಾದಕ ಪಂಡಿತ ತುಕಾರಾಮರಾವ್ ರಂಗಧೋಳ್‌ ಅವರಿಗೆ ನೀಡಿ, ’ಗಾನ ಮಲ್ಲಿಗೆ-55’ ಅಂಗವಾಗಿ ಏರ್ಪಡಿಸಿದ್ದ ’ಕಾವ್ಯ ಸಂಗೀತ ಸಂಜೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೀರ್ತನೆ, ಭಜನೆ, ಭಕ್ತಿಗೀತೆಗಳು ಕಲಿಯುಗದಲ್ಲಿ ಮೋಕ್ಷ ಸಾಧನೆಗೆ ಮಾರ್ಗಗಳೆಂಬ ಭಾಗವತದ ಮಾತುಗಳನ್ನು ಉಲ್ಲೇಖಿಸಿದ ಅವರು, ಮನರಂಜನೆಯಷ್ಟೇ ಅಲ್ಲ ಅದರ ಆಚೆಗೂ ಸುಗಮ ಸಂಗೀತದಲ್ಲಿ ಅವಕಾಶವಿರುವುದರಿಂದ ಇದು ಶ್ರೇಷ್ಠ ಸಂಗೀತ ಪ್ರಾಕಾರ. ಸಂಗೀತದ ಎಲ್ಲ ಪ್ರಾಕಾರಗಳಲ್ಲಿ ಸುಗಮಸಂಗೀತದಲ್ಲಿ ಮಾತ್ರ ಕೇಳಿದ್ದನ್ನು ತೆಗೆದುಕೊಂಡು ಹೋಗುತ್ತೇವೆ. ತತ್ತ್ವ, ಒಳಗಿನ ಹೊಳಹುಗಳು ಕಾಣುತ್ತದೆ ಎಂದರು. ದಾಸ ಸಾಹಿತ್ಯ ಕನ್ನಡ ನಾಡಿದ ಸಾರಸ್ವತ ಲೋಕದ ಅದ್ಭುತ. ಇದರಲ್ಲಿ ನೀತಿ, ಭಕ್ತಿ, ತತ್ತ್ವ ಸಿದ್ಧಾಂತ, ಬೋಧನೆ, ಚಿಂತನೆಗಳಿವೆ ಇವನ್ನೆಲ್ಲ ಅರ್ಥ ಮಾಡಿಕೊಂಡು ಹಾಡಿದರೆ ಸಮಾಜದಲ್ಲಿ ಪರಿವರ್ತನೆಗೆ ಸಾಧನವಾಗುತ್ತದೆ. ಸಾಹಿತ್ಯ ಅರಿಯದಿದ್ದರೆ ಕಣ್ಣುಕಟ್ಟಿಕೊಂಡು ತೀರ್ಥಯಾತ್ರೆ ಮಾಡಿ ದಂತಾಗುವುದೆಂದು ಹೇಳಿದರು.

ತುಕಾರಾಮ್ ಭಜನೆಯಿಂದ ತಬಲಾ ಕಡೆಗೆ ಹೊರಳಲು ತಮ್ಮ ತಂದೆ ಕಾರಣ. ಪಂಡರಾಪುರದ ವಿಠ್ಠಲನ ಆರಾಧಕರಾದ ಅಜ್ಜ ಭಜನೆ ಹಾಡುತ್ತಾ ಕುಟುಂಬದ ಮೇಲೆ ಪ್ರಭಾವ ಬೀರಿದ್ದರು. ಡಾ.ಪುಟ್ಟರಾಜ ಗವಾಯಿಗಳೂ ಸೇರಿದಂತೆ 6 ಜನ ಗುರುಗಳಿಂದ ಕಲಿತಿದ್ದು ಅವರಿಗೆ ಗೌರವ ಸಂದಾಯ ವಾಗುತ್ತದೆ ಎಂದರು.

ಆಶಾಕಿರಣ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಜಿ.ವಿ.ಅತ್ರಿ ಇಲ್ಲಿ ಆರಂಭಿಸಿದ ಸಂಗೀತಗಂಗಾ ನೂರಾರು ಸಂಗೀತಗಾರರನ್ನು ಹುಟ್ಟು ಹಾಕಿದೆ. ಸಂಗೀತ ಒಂದು ಚಮತ್ಕಾರ. ಹೊಟ್ಟೆಯಲ್ಲಿದ್ದಾಗಿನಿಂದ ಚಟ್ಟದವರೆಗೂ ಸಂಗೀತ ಬೇಕು. ನೂರಾರು ಕಾಯಿಲೆಗಳನ್ನು ತಡೆಗಟ್ಟು ಶಕ್ತಿಯೂ ಸಂಗೀತಕ್ಕಿದೆ ಎಂದು ಹೇಳಿದರು.

ಎಐಟಿ ವಿ.ವಿ.ಕುಲಸಚಿವ ಡಾ.ಸಿ.ಕೆ.ಸುಬ್ರಾಯ, ಪ್ರಾಂಶುಪಾಲ ಡಾ.ಜಯದೇವ, ಕಲ್ಕಟ್ಟೆ ಪುಸ್ತಕ ಮನೆ ಅಧ್ಯಕ್ಷೆ ರೇಖಾ ನಾಗರಾಜರಾವ್, ಬೀರೂರು ಮಲ್ಲಿಗೆ ಬಳಗದ ಅಧ್ಯಕ್ಷೆ ಸ್ವರ್ಣಾ ಗುರುನಾಥ್, ಬುಕ್ಕಾಬುದಿಯ ಅನಿತಾಪ್ರಭು ಮಾತನಾಡಿದರು. ಗಾಯಕರಾದ ಮಲ್ಲಿಗೆ ಸುಧೀರ್, ಮಂಜುಳಾ ಮಹೇಶ್, ಅಭಿ ಮಲ್ಲಿಗೆ, ಮೋಹನಕುಮಾರ್ ಉಪಸ್ಥಿತರಿದ್ದರು. ಕಲ್ಕಟ್ಟೆ ಪುಸ್ತಕದ ಮನೆಯ ಎಚ್.ಎಂ.ನಾಗರಾಜರಾವ್ ಸ್ವಾಗತಿಸಿ, ನಿರೂಪಿಸಿದರು. 6 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ’ವಾರ್ಷಿಕ ಮಲ್ಲಿಗೆ ಪುರಸ್ಕಾರ’ವನ್ನು ಖ್ಯಾತ ತಬಲಾ ವಾದಕ ಪಂಡಿತ ತುಕಾರಾಮರಾವ್ ರಂಗಧೋಳ ಅವರಿಗೆ ನೀಡಿ ಗೌರವಿಸಲಾಯಿತು. ಶಂಕರ ಶಾನುಭಾಗ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಸಿ.ಕೆ. ಸುಬ್ರಾಯ, ಡಾ. ಸಿ.ಟಿ. ಜಯದೇವ್‌, ನಾಗರಾಜ್‌ರಾವ್ ಕಲ್ಕಟ್ಟೆ ಹಾಗೂ ಇತರರು ಇದ್ದರು.