ವಿಲೇವಾರಿಯಾಗದ ಕಸ, ಅಧಿಕಾರಿಗಳಿಗೆ ತರಾಟೆ

| Published : Jun 20 2024, 01:02 AM IST

ಸಾರಾಂಶ

ಸರಿಯಾಗಿ ಮನೆ-ಮನೆಗೆ ಕಸದ ವಾಹನಗಳು ಹೋಗಿ ಕಸ ಸಂಗ್ರಹಿಸುತ್ತಿಲ್ಲ, ಬರೀ ರಿಪೇರಿ ನೆಪ ಹೇಳಲಾಗುತ್ತಿದೆ. ಇನ್ನು, ಅಲಲ್ಲಿ ಬಿದ್ದಿರುವ ಕಸ ಸಂಗ್ರಹಿಸುವ ಟ್ರ್ಯಾಕ್ಟರ್‌ಗಳೂ ಒಂದೊಂದು ಬಡಾವಣೆಗೆ ತಿಂಗಳುಗಟ್ಟಲೇ ಬರುವುದಿಲ್ಲ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರದ ಕಸ ವಿಲೇವಾರಿ ಪಾಲಿಕೆಗೆ ನುಂಗಲಾರದು ತುತ್ತು. ಪಾಲಿಕೆಗೆ ವಿವಿಧ ಮೂಲಗಳಿಂದ ಅನುದಾನ ಹರಿದು ಬಂದರೂ ಈ ವರೆಗೂ ನಗರದಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆಗೆ ಏತಕ್ಕೆ ಸಾಧ್ಯವಾಗುತ್ತಿಲ್ಲ? ಎನ್ನುವ ಯಕ್ಷ ಪ್ರಶ್ನೆ ಪಾಲಿಕೆ ಸದಸ್ಯರು ಸೇರಿದಂತೆ ಅವಳಿ ನಗರದ ನಾಗರೀಕರಿಗೂ ಕಾಡುತ್ತಿದೆ.

ಇಲ್ಲಿಯ ಮಹಾನಗರ ಪಾಲಿಕೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಕಸ ವಿಲೇವಾರಿ ಕುರಿತು ತರಾಟೆಗೆ ತೆಗೆದುಕೊಂಡಿದ್ದೇ ಇದಕ್ಷೆ ಸಾಕ್ಷಿ. ಒಂದು ಹಂತದಲ್ಲಿ ಸದಸ್ಯರನ್ನು ಸಮಾಧಾನ ಮಾಡಲು ಬಂದ ಮೇಯರ್‌ ಅನುಪಸ್ಥಿತಿಯಲ್ಲಿ ಮೇಯರ್‌ ಸ್ಥಾನ ಅಲಂಕರಿಸಿದ್ದ ಉಪ ಮೇಯರ್‌ ಸಂತೋಷ ಹಾನಗಲ್‌ ಅವರನ್ನು ಸದಸ್ಯರು ಗದರಿಸಿದರು.

ಎಲ್ಲಿವೆ ಕಸದ ವಾಹನಗಳು?:

ಸರಿಯಾಗಿ ಮನೆ-ಮನೆಗೆ ಕಸದ ವಾಹನಗಳು ಹೋಗಿ ಕಸ ಸಂಗ್ರಹಿಸುತ್ತಿಲ್ಲ, ಬರೀ ರಿಪೇರಿ ನೆಪ ಹೇಳಲಾಗುತ್ತಿದೆ. ಇನ್ನು, ಅಲಲ್ಲಿ ಬಿದ್ದಿರುವ ಕಸ ಸಂಗ್ರಹಿಸುವ ಟ್ರ್ಯಾಕ್ಟರ್‌ಗಳೂ ಒಂದೊಂದು ಬಡಾವಣೆಗೆ ತಿಂಗಳುಗಟ್ಟಲೇ ಬರುವುದಿಲ್ಲ. ಪೌರ ಕಾರ್ಮಿಕರು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಅವಳಿ ನಗರ ಸುಂದರ ನಗರ ಎಂಬುದು ಹೆಸರಿಗಷ್ಟೇ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ಜತೆಗೆ ಅವಳಿ ನಗರದಲ್ಲಿ ಸಮರ್ಪಕ ಕಸ ವಿಲೇವಾರಿ ಆಗದಿರಲು ನಿಖರ ಕಾರಣವೇನು? ಕಸದ ವಾಹನಗಳೆಷ್ಟು? ಈ ಪೈಕಿ ಎಷ್ಟು ಚಾಲ್ತಿ, ಎಷ್ಟು ರಿಪೇರಿ ಇವೆ. ಪೌರ ಕಾರ್ಮಿಕರ ಸಂಖ್ಯೆ ಎಷ್ಟು? ಈ ಪೈಕಿ ಎಷ್ಟು ಜನರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟು ಜನರು ಬರೀ ಹಾಜರಿ ಹಾಕುತ್ತಿದ್ದಾರೆ? ಎಂಬ ಪ್ರಶ್ನೆಗಳನ್ನು ಪಾಲಿಕೆ ಅಧಿಕಾರಿಗಳ ಮುಂದಿಟ್ಟರು.

67 ವಾರ್ಡ್‌ಗಳನ್ನು ಪುನರ್‌ ವಿಂಗಡನೆ ಮಾಡಿ 82 ವಾರ್ಡ್‌ ಮಾಡಲಾಗಿದ್ದು, ಅವುಗಳಿಗೆ ತಕ್ಕಂತೆ ಕಸದ ವಾಹನ, ಪೌರ ಕಾರ್ಮಿಕರನ್ನು ನೇಮಿಸಬೇಕು. ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋದರೆ ಕಸ ನಿರ್ವಹಣೆ ಸಾಧ್ಯವಿಲ್ಲ. ಕಸದ ಟಿಪ್ಪರ್‌ಗಳಿದ್ದರೂ ಅವು ಸರಿಯಾಗಿ ಬರುತ್ತಿಲ್ಲ. ಪೌರ ಕಾರ್ಮಿಕರು ಸರಿಯಾಗಿ ಹಾಜರಿ ಹಾಕುತ್ತಿಲ್ಲ. ಸ್ವಚ್ಛತೆಗೆ ವಾರ್ಡ್‌ಗಳಿಗೆ ಯಾವಾಗ ಬಂದು ಹೋಗುತ್ತಾರೆ ಎಂಬುದು ನಮಗೂ ಗೊತ್ತಾಗದ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿ ಸದಸ್ಯ ಮಂಜುನಾಥ ಬಟ್ಟೆಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

ಕಸ ವಿಲೇವಾರಿ ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ಕೊಡಲಾಗದ ನಿಮಗೆ ಹೊಸ ವಾಹನ ಖರೀದಿಸಿ ಅವುಗಳನ್ನು ಹೇಗೆ ಕಾರ್ಯಗತಗೊಳಿಸಲು ಸಾಧ್ಯ. ಈ ವಿಚಾರವಾಗಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು. ಆಗ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರೂ ಕಾಂಗ್ರೆಸ್ ಸದಸ್ಯರು ತೃಪ್ತರಾಗಲಿಲ್ಲ. ಈ ಮಧ್ಯೆ ಮೇಯರ್ 2024-25ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆ ಮಂಜೂರಾತಿ ಬಗೆಗಿನ ನಡಾವಳಿ ದೃಢೀಕರಣಕ್ಕೆ ಮುಂದಾದಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ ಹೊರಗಡೆ ಪ್ರತಿಭಟನೆ ನಡೆಸಿದರು. ಹೀಗಾಗಿ ಆರಂಭಗೊಂಡ ಎರಡು ಗಂಟೆಗಳಲ್ಲಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಸದಸ್ಯರ ತೀವ್ರ ಪ್ರಶ್ನೆಗಳ ನಂತರ ಪಾಲಿಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ, ಕಸ ವಿಲೇವಾರಿಗೆ 470 ವಾಹನಗಳು ಬೇಕು. ಸದ್ಯ ನಮ್ಮಲ್ಲಿ 216 ವಾಹನಗಳಿವೆ. ಈ ಪೈಕಿ 10-15 ವಾಹನಗಳು ದಿನಂಪ್ರತಿ ದುರಸ್ತಿಯಲ್ಲಿರುತ್ತವೆ. ಇಂದು ಅಥವಾ ನಾಳೆ 41 ಹೊಸ ಕಸ ವಿಲೇವಾರಿ ವಾಹನಗಳು ಬರಲಿವೆ. ಮತ್ತೆ ಬೇಕಾಗಿರುವ 234 ವಾಹನಗಳ ಪೈಕಿ 102 ವಾಹನಗಳ ಖರೀದಿಗೆ ಅನುಮೋದನೆ ಸಿಕ್ಕಿದೆ. ಈ ಪೈಕಿ 20 ಕಾಂಪ್ಯಾಕ್ಟರ್‌ ಖರೀದಿಸಿ ಆಟೋ ಟಿಪ್ಪರ್‌ಗಳಿಂದ ವಾರ್ಡ್‌ಗಳಿಂದಲೇ ಕಸ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಸಭಾತ್ಯಾಗ:

ಈ ಮಧ್ಯೆ ತಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ನೇತೃತ್ವದಲ್ಲಿ ವೇದಿಕೆ ಎದುರು ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು. ಕಸ ವಿಲೇವಾರಿ ಸಮಸ್ಯೆ ಬಗ್ಗೆ ಚರ್ಚಿಸದೆ ವಿಷಯಪಟ್ಟಿ ಓದುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕೈ ಸದಸ್ಯರು ಸಭಾತ್ಯಾಗ ಮಾಡಿದರು. ನಂತರ ಪಾಲಿಕೆ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತು ಕೈ ಸದಸ್ಯರು ಕೆಲಕಾಲ ಪ್ರತಿಭಟನೆ ನಡೆಸಿದರು.ತಾವು ಅಧಿಕಾರ ಸ್ವೀಕರಿಸಿದ ದಿನದಿಂದ ಕಸ ನಿರ್ವಹಣೆ ಬಗ್ಗೆ ಕ್ರಮಕೈಗೊಂಡಿದ್ದು ಇನ್ಮುಂದೆ ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಿ ಈ ಬಗ್ಗೆ ಸ್ವತಃ ಪರಿಶೀಲಿಸುತ್ತೇನೆ. ಕಸ ಸಂಗ್ರಹಣೆ, ಪೌರ ಕಾರ್ಮಿಕರ ಕ್ಷಮತೆ ನೋಡುತ್ತೇನೆ. ಕಸ ಸಂಗ್ರಹಣೆಗೆ 41 ಹೊಸ ಆಟೋ ಟಿಪ್ಪರ್‌ಗಳನ್ನು ಶೀಘ್ರದಲ್ಲೇ ವಾರ್ಡ್‌ಗಳಿಗೆ ನೀಡಲಾಗುವುದು. ಮುಂದಿನ ಸಾಮಾನ್ಯ ಸಭೆಯೊಳಗೆ ಕಸಲೇವಾರಿ, ವಾಹನ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ಮಳೆಗಾಲದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ. ನಾಲಾಗಳಲ್ಲಿ ಹೂಳು ತುಂಬಿದ್ದು, ಗಿಡ-ಗಂಟಿ ಬೆಳೆದಿವೆ. ಪಾಲಿಕೆ ಸದಸ್ಯರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕರೆ ಸ್ವೀಕರಿಸುತ್ತಿಲ್ಲ. ಡೆಂಘೀ ಹಾವಳಿ ಹೆಚ್ಚಿದೆ. ಸೊಳ್ಳೆಗಳ ಕಾಟ ಮಿತಿಮೀರಿದೆ. ಈ ನಿರ್ಲಕ್ಷ್ಯದಿಂದ ಯಾರಾದರೂ ಮೃತಪಟ್ಟರೆ ಯಾರು ಹೊಣೆ ಎಂದು ಸರ್ವಪಕ್ಷಗಳ ಸದಸ್ಯರು ಕಿಡಿಕಾರಿದರು. ಈ ವೇಳೆ ಧಾರವಾಡದ ಸದಸ್ಯೆ ಲಕ್ಷ್ಮಿ ಹಿಂಡಸಗೇರಿ, ರಾಜೀವಗಾಂಧಿ ನಗರದಲ್ಲಿ ಸ್ವಚ್ಛತೆಯೇ ಇಲ್ಲ. ಗಟಾರುಗಳು ಒಡೆದಿವೆ. ಸೊಳ್ಳೆಗಳ ಕಾಟ ಮಿತಿಮೀರಿದೆ. ನಮ್ಮ ವಾರ್ಡ್‌ನಲ್ಲಿ ಯಾರಾದರು ಸತ್ತರೆ ಮೃತದೇಹದೊಂದಿಗೆ ಪಾಲಿಕೆಗೆ ಬರುವುದಾಗಿ ಎಚ್ಚರಿಸಿದರು.ಎಲ್ಲ ವಿಷಯಗಳು ಪಾಸ್‌:

ಧಾರವಾಡದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ವಿಷಯಗಳು ಸೇರಿದಂತೆ ಒಟ್ಟು 15 ವಿಷಯಗಳಿಗೆ ಅನುಮೋದನೆ ಪಡೆಯಲಾಯಿತು. ಆದರೆ, ಅಧಿಕಾರಿಗಳು ಪಾಲಿಕೆ ಸದಸ್ಯರಿಗೆ ವಿಷಯಪಟ್ಟಿ ನೀಡದೆಯೇ ಸಭೆಯ ಒಪ್ಪಿಗೆ ಪಡೆಯಲು ಮುಂದಾದಾಗ ಕೆಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಧ್ಯಮದವರು ವಿಷಯಪಟ್ಟಿ ಕೇಳಿದರೂ ಸಿಬ್ಬಂದಿ ನೀಡಲಿಲ್ಲ. ಜತೆಗೆ ವಿಪಕ್ಷ ಸದಸ್ಯರೇ ಇಲ್ಲದೇ ಎಲ್ಲ ವಿಷಯಗಳನ್ನು ಪಾಸ್‌ ಮಾಡಲಾಯಿತು.