ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ

| Published : Mar 23 2024, 01:00 AM IST

ಸಾರಾಂಶ

ಲೋಕಸಭಾ ಚುನಾವಣೆ ಘೊಷಣೆಯಾಗಿ ಎಲ್ಲೆಡೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದ್ದರಿಂದ ಅನಧಿಕೃತ, ಅಕ್ರಮ ಹಣ, ಮದ್ಯ ಹಾಗೂ ವಸ್ತುಗಳ ಸಾಗಾಣಿಕೆ ಮೇಲೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿದ್ದು, ಹೀಗೆ ಜಿಲ್ಲೆ ವಿವಿಧ ಪ್ರದೇಶಗಳಲ್ಲಿ ವಾಹನಗಳಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 8.30 ಲಕ್ಷ ರು. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಯಚೂರು: ಲೋಕಸಭಾ ಚುನಾವಣೆ ಘೊಷಣೆಯಾಗಿ ಎಲ್ಲೆಡೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದ್ದರಿಂದ ಅನಧಿಕೃತ, ಅಕ್ರಮ ಹಣ, ಮದ್ಯ ಹಾಗೂ ವಸ್ತುಗಳ ಸಾಗಾಣಿಕೆ ಮೇಲೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿದ್ದು, ಹೀಗೆ ಜಿಲ್ಲೆ ವಿವಿಧ ಪ್ರದೇಶಗಳಲ್ಲಿ ವಾಹನಗಳಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 8.30 ಲಕ್ಷ ರು. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಸಿಂಗನೋಡಿ ಸಮೀಪದ ತೆಲಂಗಾಣ ಗಡಿಭಾಗದಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೇ 4 ಲಕ್ಷ ರು. ತೆಗೆದುಕೊಂಡು ಹೋಗುತ್ತಿದ್ದ ಸ್ವಿಫ್ಟ್‌ ಡಿಸೈರ್‌ ಕಾರನ್ನು ತಪಾಸಣೆ ನಡೆಸಿದ ಕಂದಾಯ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದು ಜಿಲ್ಲಾ ಖಜಾನೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾ ಹಣ ಜಪ್ತಿ ಪರಿಹಾರ ಸಮಿತಿ ಅಧ್ಯಕ್ಷ, ಎಂಸಿಸಿ ನೋಡಲ್ ಅಧಿಕಾರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಮ ಅವರು ತಿಳಿಸಿದ್ದಾರೆ.

ಇನ್ನು ತಾಲೂಕಿನ ಯರಗೇರಾ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಸಮಯದಲ್ಲಿ 1 ಲಕ್ಷ 30 ಸಾವಿರ ರು. ನಗದು ಜಪ್ತಿ ಮಾಡಿಕೊಂಡಿದ್ದಾರೆ. ಇನ್ನು ಸಿಂಧನೂರು ತಾಲೂಕಿನ ಮನ್ನಿಕೆರೆ ಕ್ಯಾಂಪಿನಲ್ಲಿ 3 ಲಕ್ಷ ರು. ಹಣವನ್ನು ಜಪ್ತಿಮಾಡಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆಯ ಎಂಸಿಸಿ ಜಾರಿಯಾಗಿದ್ದರಿಂದ ಜಿಲ್ಲೆಯಾದ್ಯಂತ 23 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ಪೊಲೀಸ್‌, ಕಂದಾಯ ಹಾಗೂ ಅಬಕಾರಿ ಸೇರಿ ಇತರೆ ಇಲಾಖೆಗಳ ತಂಡದವರು ನಿರಂತರ ತಪಾಸಣೆ ನಡೆಸಿ ಅಕ್ರಮ, ಅನಧಿಕೃತ ಹಣ, ಮದ್ಯ ರವಾನೆಯ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌.ಬಿ ತಿಳಿಸಿದ್ದಾರೆ.