ಸಾರಾಂಶ
ವಿಶೇಷ ವರದಿ ಮುಳಗುಂದ
ಸಮೀಪದ ಬಸಾಪುರ, ಸೀತಾಲಹರಿ ಸೇರಿದಂತೆ ಪಟ್ಟಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸುತ್ತಿರುವ 50ಕ್ಕೂ ಹೆಚ್ಚು ಮನೆಗಳು ಅಪೂರ್ಣವಾಗಿದ್ದು, 4 ವರ್ಷದಿಂದ ಕೆಲಸ ಸ್ಥಗಿತವಾದ ಹಿನ್ನೆಲೆ ಫಲಾನುಭವಿಗಳು ಶೆಡ್, ಗುಡಿಸಲು ಆಶ್ರಯದಲ್ಲಿ ವಾಸಿಸುವಂತಾಗಿದೆ.ಮುಳಗುಂದ ಪಪಂ ವ್ಯಾಪ್ತಿಗೆ ಒಳಪಡುವ ಸೀತಾಲಹರಿ, ಬಸಾಪುರ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಪಪಂಗೆ ಈ ಎರಡು ಗ್ರಾಮಗಳು ಸೇರಿದ್ದರೂ ನಗರ ಪ್ರದೇಶದ ಸೌಲಭ್ಯಗಳು ಇಲ್ಲಿ ಮರೀಚಿಕೆಯಾಗಿವೆ. ಅತ್ತ ಗ್ರಾಪಂ ಸೌಲಭ್ಯವೂ ಇಲ್ಲ, ಇತ್ತ ನಗರ ಪ್ರದೇಶದ ಸೌಲಭ್ಯವೂ ಇಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ಹರಿಣಶಿಕಾರಿ ಕಾಲನಿ, ಅಂಬೇಡ್ಕರ್ ನಗರ ಸೇರಿದಂತೆ ಸೀತಾಲಹರಿ, ಬಸಾಪುರವನ್ನು ಕೊಳಗೇರಿ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2019ರಲ್ಲಿ ಪಿಎಂಎವೈಎಚ್‌ಎಫ್‌ಎ ಯೋಜನೆಯಡಿ 160ಕ್ಕೂ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣ ಕೆಲಸ ಆರಂಭಿಸಲಾಗಿತ್ತು. ಆದರೆ ಇಲ್ಲಿವರೆಗೂ ಬಹುತೇಕ ಮನೆ ಪೂರ್ಣವಾಗಿಲ್ಲ. ಬಸಾಪುರ ಮತ್ತು ಸೀತಾಲಹರಿಯಲ್ಲಿ 60 ಕುಟುಂಬಗಳ ನಿವಾಸಿಗಳು ಹೊಸ ಮನೆ ನಿರ್ಮಾಣದ ಆತುರದಲ್ಲಿ ಇದ್ದ ಹಳೆಯ ಮನೆ ಕೆಡವಿದ್ದಾರೆ.ಅಪೂರ್ಣ ಕಾಮಗಾರಿ:
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರ ಪ್ಲಿಂತ್, ಲಿಂಟಲ್ ಹಾಗೂ ಸ್ಲ್ಯಾಬ್ ವರೆಗೂ ಕೆಲವು ಮನೆಗಳ ಕಾಮಗಾರಿ ಮಾಡಿದ್ದಾರೆ. ಹಲವು ಮನೆಗಳಿಗೆ ಕಿಟಕಿ, ಬಾಗಿಲುಗಳೇ ಇಲ್ಲದಾಗಿದೆ. ಕಳೆದ ಹಲವು ವರ್ಷದಿಂದ ಕೆಲಸವೂ ಸ್ಥಗಿತವಾಗಿದೆ. ಹೊಸ ಮನೆ ಕಟ್ಟಿಕೊಂಡು ಸಂತಸಪಡಬೇಕಿದ್ದ ಬಡಕುಟುಂಬಗಳು, ಅಂಗಳದಲ್ಲಿ ಸಾಮಾನು ಸರಂಜಾಮು ಇಟ್ಟುಕೊಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.ಅಪೂರ್ಣಗೊಂಡ ಮನೆಯಲ್ಲಿಯೆ ಅನಿವಾರ್ಯವಾಗಿ ಹಲವಾರು ಕುಟುಂಬಗಳು ವಾಸವಾಗಿದ್ದು, ವಿದ್ಯುತ್, ನೀರು, ಶೌಚಗೃಹ, ಸ್ನಾನಗೃಹ ವ್ಯವಸ್ಥೆ ಇಲ್ಲದೆ ಜೀವನ ಕಳೆಯುವಂತಾಗಿದೆ. ಇನ್ನು ಹಲವು ಮನೆಗಳ ನಿರ್ಮಾಣ ಆಗಬೇಕಿದ್ದು, ಈ ಸಂಬಂಧ ಹತ್ತಾರೂ ಫಲಾನುಭವಿಗಳು ಮನೆ ನಿರ್ಮಾಣದ ವಂತಿಕೆ ಹಣ 2023ರಲ್ಲಿ ₹ 50 ಸಾವಿರ ಡಿಡಿ ಕಟ್ಟಿದ್ದು, ಈ ವರೆಗೂ ಕೆಲಸ ಆರಂಭಿಸಿಲ್ಲ. ಇಂದು, ನಾಳೆ ಎನ್ನುತ್ತಿರುವ ಗುತ್ತಿಗೆದಾರ ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಫಲಾನುಭವಿ ಮೈಲಾರಪ್ಪ ಜೋಗಿ ಆಕ್ರೋಶ ವ್ಯಕ್ತಪಡಿಸಿದರು.
ಮನೆ ಪೂರ್ಣಗೊಳಿಸಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಗೂ ಸಾಕಷ್ಟು ಬಾರಿ ಅಲೆದಾಡಿ ಮನವಿ ಕೊಟ್ಟಿದ್ದೇವೆ. ಆದರು ಯಾವ ಅಧಿಕಾರಿಯೂ ಇತ್ತ ಕಡೆ ಬಂದಿಲ್ಲ, ಯಾವ ಕ್ರಮ ಕೈಗೊಂಡಿಲ್ಲ. ಬಡವರ ಮನೆ ನಿರ್ಮಾಣದ ಕನಸು ಕನಸಾಗಿಯೆ ಉಳಿದಿದೆ. ಹೀಗೆ ಮುಂದುವರಿದರೆ ಗದಗ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಫಲಾನುಭವಿಗಳು ಎಚ್ಚರಿಸಿದ್ದಾರೆ.ಹೆಸರಿಗೆ ಮಾತ್ರ ಪಪಂಗೆ ಸೀತಾಲಹರಿ, ಬಸಾಪುರ ಸೇರಿದೆ. ಆದರೆ ಮೂಲ ಸೌಲಭ್ಯ ಮಾತ್ರ ದೊರೆಯುತ್ತಿಲ್ಲ. ಜನಪ್ರತಿನಿಧಿಗಳು ಸಹ ನಮ್ಮ ಕಡೆ ಗಮನ ಹರಿಸುತ್ತಿಲ್ಲ. ಹೊಸ ಮನೆ ನಿರ್ಮಾಣ ಕನಸಾಗಿಯೆ ಉಳಿದಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ ವಡ್ಡರ ಹೇಳಿದ್ದಾರೆ.
ಆರು ತಿಂಗಳಲ್ಲಿ ಮನೆ ನಿರ್ಮಾಣ ಮಾಡುವುದಾಗಿ ಹೇಳಿದ್ದ ಎಂಜಿನಿರ್ ಆರು ವರ್ಷಗಳಾದರೂ ಇನ್ನೂ ನಮ್ಮ ಮನೆ ಪೂರ್ಣ ಮಾಡಿಲ್ಲ. ಬಾಗಿಲು, ಕಿಟಕಿ ಇಲ್ಲದ ಅರ್ಧಂಬರ್ಧ ಕಟ್ಟಿದ ಮನೆಯಲ್ಲೆ ವಾಸ ಮಾಡುತ್ತಿದ್ದೇವೆ. ಮನೆಯಲ್ಲಿ ಶುಭ ಕಾರ್ಯಕ್ಕೂ ಸಮಸ್ಯೆ ಆಗಿದೆ ಎಂದು ಸೀತಾಲಹರಿ ನಿವಾಸಿ ದೇವಮ್ಮ ವಡ್ಡರ ತಿಳಿಸಿದ್ದಾರೆ.