ಸಾರಾಂಶ
ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹೃದಯ ದಿನ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬದಲಾದ ಜೀವನಶೈಲಿ ಅತಿಯಾದ ಒತ್ತಡ ಅಸ್ವಸ್ಥ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಗಳಿಂದ ಹೃದಯ ರೋಗಗಳು ಹೆಚ್ಚುತ್ತಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್ ಹೇಳಿದರು.ತಾಲೂಕಿನ ಬೆಲಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹೃದಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ಲಕ್ಷಾಂತರ ಜನರು ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂಬುದು ಆತಂಕಕಾರಿ ವಿಷಯವಾದರು ಹೃದಯರೋಗಗಳಲ್ಲಿ ಶೇ.80ರಷ್ಟು ಕಾಯಿಲೆಗಳನ್ನು ಸರಳ ಜೀವನಶೈಲಿ ಬದಲಾವಣೆಯಿಂದ ತಡೆಯಬಹುದು ಎಂದರು.
ಪ್ರತಿ ವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೃದಯಸಂಬಂಧಿ ಕಾಯಿಲೆಗಳನ್ನು ತಡೆಯುವ ಮಾರ್ಗಗಳನ್ನು ತಿಳಿಸುವುದಾಗಿದೆ. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ನಡಿಗೆ. ಊಟದಲ್ಲಿ ಹಣ್ಣು, ತರಕಾರಿ, ಹಸಿರು ಸೊಪ್ಪು ಮುಂತಾದ ಪೋಷಕಾಂಶಯುಕ್ತ ಆಹಾರದ ಬಳಕೆ. ಅತಿಯಾದ ಎಣ್ಣೆ, ಉಪ್ಪು, ಸಕ್ಕರೆ ಸೇವನೆಯನ್ನು ನಿಯಂತ್ರಿಸುವುದು. ಧೂಮಪಾನ, ಮದ್ಯಪಾನ ಸಂಪೂರ್ಣವಾಗಿ ತ್ಯಜಿಸುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.ಹೃದಯ ಕೇವಲ ದೇಹಕ್ಕೆ ರಕ್ತ ಪೂರೈಸುವ ಅಂಗವಷ್ಟೇ ಅಲ್ಲ, ಅದು ನಮ್ಮ ಜೀವನದ ನಾಡಿ. ಹೃದಯ ಆರೋಗ್ಯಕರವಾಗಿದ್ದರೆ ಜೀವನ ಸಮೃದ್ಧವಾಗಿರುತ್ತದೆ. ಆದ್ದರಿಂದ ನಮ್ಮ ಹೃದಯ ನಮ್ಮ ಹೊಣೆಗಾರಿಕೆ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಮನದಲ್ಲಿ ಇಟ್ಟುಕೊಂಡು ತಮಗೂ ತಮ್ಮ ಕುಟುಂಬಕ್ಕೂ ಸಮಾಜಕ್ಕೂ ಆರೋಗ್ಯಕರ ಜೀವನಶೈಲಿಯನ್ನು ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಂತ ವೈದ್ಯಾಧಿಕಾರಿಗಳಾದ ಡಾ.ಸುಮಾ, ಡಾ.ಹರ್ಷ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಮ್ಮ ಮತ್ತು ಸಮುದಾಯ ಆರೋಗ್ಯ ಕೇಂದ್ರ ಬೆಲಗೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಲ್ಲಾಳಸಮುದ್ರ ಸಿಬ್ಬಂದಿಗಳು ಹಾಜರಿದ್ದರು.