ಸಾರಾಂಶ
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದ ಸಂಸದರು ಮತ್ತು ಮುಖಂಡರ ನಿಯೋಗ ಗುರುವಾರ ಭೇಟಿಯಾಗಿ, ತೆಂಗು ಮತ್ತು ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ಪರಿಹಾರಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದ ಸಂಸದರು ಮತ್ತು ಮುಖಂಡರ ನಿಯೋಗ ಗುರುವಾರ ಭೇಟಿಯಾಗಿ, ತೆಂಗು ಮತ್ತು ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ಪರಿಹಾರಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.ಅಡಕೆ ಮತ್ತು ಮಾನವ ಆರೋಗ್ಯದ ಮೇಲೆ ಪ್ರಮಾಣಾಧಾರಿತ ಸಂಶೋಧನೆ ನಡೆಸಲು ಕೃಷಿ ಸಚಿವಾಲಯ ಮಂಜೂರು ಮಾಡಿದ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.
ಅಡಕೆಯ ಅಕ್ರಮ ಆಮದು ತಡೆಗಟ್ಟಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಆಮದು ಅನುಮತಿಗೆ ಮುನ್ನ ಕ್ಯಾಂಪ್ಕೋ, ಟಿಎಸ ಎಸ್, ಮ್ಯಾಂಪ್ಕೋಸ್ ಮುಂತಾದ ಸಹಕಾರಿಗಳ ಸಲಹೆ ಪಡೆಯುವುದು ಸೂಕ್ತ ಎಂದು ಸೂಚಿಸಲಾಯಿತು.ಈ ನಿಯೋಗದಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಆಹಾರ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವರಾದ ಪ್ರಹ್ಲಾದ್ ಜೋಶಿ, ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಸೇರಿದಂತೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೋಟ ಶ್ರೀನಿವಾಸ ಪೂಜಾರಿ, ಯದುವೀರ್ ಒಡೆಯರ್, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೊಡ್ಗಿ ಉಪಸ್ಥಿತರಿದ್ದರು.