ಸಾರಾಂಶ
ಕೇಂದ್ರ ಬಜೆಟ್ ಕೃಷಿಕರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ : ಕೇಂದ್ರ ಬಜೆಟ್ ಕೃಷಿಕರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ, ಕೃಷಿಗೆ ಕಡಿಮೆ ಆದ್ಯತೆ ನೀಡಿ ವೈಜ್ಞಾನಿಕ ಸಂಶೋಧನೆಗಳಿಗೆ ಅಗತ್ಯ ಹಣಕಾಸು ಒದಗಿಸಿಲ್ಲ. ಕೃಷಿ ಉತ್ಪನ್ನಮಾರುಕಟ್ಟೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಹಣ ಕೊಟ್ಟಿಲ್ಲ. ಪ್ರಮುಖ ಆಹಾರ, ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಮಂಡಳಿಗಳನ್ನು ರಚಿಸಬೇಕೆಂಬ ಬೇಡಿಕೆ ಸ್ಪಂದಿಸಿಲ್ಲ. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಲಾಗುವ ನಿರೀಕ್ಷೆ ಹುಸಿಯಾಗಿದೆ. ಕೃಷಿ ವಲಯಕ್ಕೆ ನಬಾರ್ಡ್ ನಲ್ಲಿ ನೀಡಲಾಗುವ ಅನುದಾನ ಕಡಿಮೆಯಾಗಿದ್ದು, ರಾಜ್ಯವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಅಗ್ರಿ ಡಿಜಿಟಲ್ ಇಂಡಿಯಾ ಪ್ರಗತಿ ಕಂಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಮಾಯವಾಗಿದೆ ಎಂದು ತಿಳಿಸಿದ್ದಾರೆ.
ಬಜೆಟ್ ಕುರಿತು ಹೇಳಿಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ 89,000 ಕೋಟಿ ರು. ಮೀಸಲಿಟ್ಟಿದ್ದರು. ಆದರೆ, ಈಗ 9 ಸಾವಿರ ಕೋಟಿಯನ್ನು ಕಡಿತ ಮಾಡಿ 80,000 ಕೋಟಿಗೆ ಸೀಮಿತಗೊಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ನರೇಗಾದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಿಗೂ ಯೋಜನೆ ವಿಸ್ತರಿಸಲು ಬಜೆಟ್‌ನಲ್ಲಿ ಹಣ ಮೀಸಲಿಡುವ ಬದಲು ಈ ರೀತಿ ಕಡಿತ ಮಾಡಿರುವುದು ಮತ್ತಷ್ಟು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತದೆ.
- ಎನ್.ಎಲ್.ಭರತ್ ರಾಜ್, ಪ್ರಾಂತ ರೈತ ಸಂಘ ತಾಲೂಕು ಅಧ್ಯಕ್ಷ, ಮಳವಳ್ಳಿ
ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ. 12 ಲಕ್ಷ ರು.ವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡಿರುವುದನ್ನು ಹೊರತು ಪಡಿಸಿ ಮೇಕೆದಾಟು ಯೋಜನೆ ಸೇರಿದಂತೆ ಎಲ್ಲ ವರ್ಗಗಳ ಬಡವರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಯಾವುದೇ ಕಾರ್ಯಕ್ರಮಗಳು ಜಾರಿಯಾಗಿಲ್ಲ. ಕರ್ನಾಟಕಕ್ಕೆ ನಿರ್ಧಿಷ್ಟ ಯೋಜನೆಗಳು ಘೋಷಣೆಯಾಗಿಲ್ಲ. ಶ್ರೀಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಉತ್ತಮ ಆಯವ್ಯಯ ಮಂಡನೆಯಾಗಿಲ್ಲ.
- ಎಚ್.ಟಿ.ಕೃಷ್ಣೇಗೌಡ, ಮಾಜಿ ಉಪಾಧ್ಯಕ್ಷ, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ
ದೇಶದ ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಉತ್ತಮ ಬಜೆಟ್ ಮಂಡನೆಯಾಗಿದೆ. ಎಲ್ಲ ಕ್ಷೇತ್ರಗಳಿಗೂ ಅನುಕೂಲವಾಗುವ ರೀತಿಯಲ್ಲಿ ಬಜೆಟ್‌ನಲ್ಲಿ ಮಂಡನೆಯಾಗಿರುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬಂದಾಗಲಷ್ಟೇ ಜನರಿಗೆ ಅನುಕೂಲವಾಗಲಿದೆ.
- ಎ.ಆರ್.ರುದ್ರಪ್ರಕಾಶ್, ನಾಗಮಂಗಲ
ವಿಕಸಿತ ಭಾರತದ ಕನಸನ್ನು ನನಸು ಮಾಡುವ ಐತಿಹಾಸಿಕ ಬಜೆಟ್ ಇದಾಗಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ದೇಶದ ಎಲ್ಲಾ ವರ್ಗಗಳ ಜನರಿಗೆ ಹಾಗೂ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಉತ್ತಮ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರಮೋದಿ ಅವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದಿಸುತ್ತೇನೆ.
- ನರಸಿಂಹಮೂರ್ತಿಜೀಗೌಡ, ರಾಜ್ಯ ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ
ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಬಜೆಟ್ ಆಶಾದಾಯಕವಾಗಿದೆ. ಬೆಳೆಗಳ ಉತ್ಪಾದಕತೆ ವೃದ್ಧಿಸಲು ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ ಆರಂಭಿಸುತ್ತಿರುವುದು ರೈತರಿಗೆ ಅನುಕೂಲ. ಟಿವಿ, ಪೋನ್ , ಔಷಧಿಗಳು, ಸ್ವದೇಶಿ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಜನಸಾಮಾನ್ಯರಿಗೆ ಅನುಕೂಲವಾಗಿದೆ.
- ಎಸ್.ಜೆ.ಆನಂದ್ , ಬಿಜೆಪಿ ಮುಖಂಡರು, ಸಬ್ಬನಕುಪ್ಪೆ
ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವ ಯಾವುದೇ ಹೊಸ ಯೋಜನೆಗಳನ್ನು ರೂಪಿಸಿಲ್ಲ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಕಾಯ್ದೆ ಜಾರಿಗೆ ತರಲು ಮುಂದಾಗಿಲ್ಲ. ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಾರಿಗೊಳಿಸದೆ ನಿರಾಶದಾಯಕ ಬಜೆಟ್ ಆಗಿದೆ.
- ಕಿರಂಗೂರು ಪಾಪು, ರೈತ ಮುಖಂಡರು
ಬಜೆಟ್ ಪೂರ್ವ ಚರ್ಚೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಕಿಸಾನ್ ಸಮ್ಮಾನ್ ನಿಧಿ ಹೆಚ್ಚಿಸುವುದು. ಕೃಷಿ ಬಿತ್ತನೆ ಬೀಜ ಗೊಬ್ಬರ ಸೇರಿದಂತೆ ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದುಪಡಿಸುವುದು ಮತ್ತು ಸಾವಯವ, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು. ಇದು ಪೂರ್ಣಗೊಳ್ಳದ ಕಾರಣ ರೈತರು ನಿರಾಸೆಗೊಂಡಿದ್ದಾರೆ. ಆದರೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹವಾಗಿದೆ.
-ಹಾಡ್ಯ ರಮೇಶ್ ರಾಜು, ಪ್ರಾಂತ ಅಧ್ಯಕ್ಷ, ಭಾರತೀಯ ಕಿಸಾನ್ ಸಂಘ