ಸಾರಾಂಶ
ಧಾರವಾಡ: ಅತಿ ಮಳೆಯಿಂದಾಗಿ ಪಕ್ಕದ ಮನೆಯ ಮಣ್ಣಿನ ಗೋಡೆ ಕುಸಿದು ಇತ್ತೀಚೆಗೆ ನಿಧನರಾದ ವೆಂಕಟಾಪುರ ಗ್ರಾಮದ ಯಲ್ಲಪ್ಪ ಹಿಪ್ಪಿಯವರ ಮನೆಗೆ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಯಲ್ಲಪ್ಪ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಲ್ಲಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಧನ ₹5 ಲಕ್ಷಗಳನ್ನು ಈಗಾಗಲೇ ನೀಡಲಾಗಿದೆ. ಗಾಯಾಳುಗಳಾಗಿದ್ದ ಯಲ್ಲಪ್ಪನ ಪತ್ನಿ ಮತ್ತು ಮಗಳಿಗೆ ಅಗತ್ಯ ವೈಧ್ಯಕೀಯ ಚಿಕಿತ್ಸೆ ನೀಡಲಾಗಿದೆ. ಅವರಿಗೆ ವಿಧವಾ ವೇತನ ಮತ್ತು ರಾಷ್ಟ್ರೀಯ ಕೌಟುಂಬಿಕ ಯೋಜನೆಯಡಿ ಆರ್ಥಿಕ ನೆರವು, ಸೌಲಭ್ಯ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನಲ್ಲಿ ಗ್ರಾಮ ಪಂಚಾಯಿತಿಯಿಂದ ತಕ್ಷಣ ಹಿಪ್ಪಿಯವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಬೇಕು. ಅತಿ ಮಳೆಯಿಂದ ಮನೆ ಹಾನಿ ಆಗಿರುವ ಜನರಿಗೆ ಮನೆ ದುರಸ್ತಿ ಅಥವಾ ನೂತನ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಬಿ.ಎಸ್. ಯಡಿಯೂರಪ್ಪ ಇದ್ದಾಗ ಪ್ರತಿ ಮನೆಗೆ ₹5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರದಿಂದ ₹2.40 ಲಕ್ಷ ನೀಡುತ್ತಿದ್ದು, ರಾಜ್ಯ ಸರ್ಕಾರ ₹2.60 ಲಕ್ಷ ಸೇರಿ ಒಟ್ಟು ₹5 ಲಕ್ಷ ನೀಡಬೇಕು. ರಾಜ್ಯ ಸರ್ಕಾರ ದಿವಾಳಿ ಎದ್ದಿದೆ. ಮುಂದಾಲೋಚನೆ ಇಲ್ಲದೇ ಗ್ಯಾರಂಟಿ ಯೋಜನೆ ನೀಡಿದೆ. ಮಳೆಯಿಂದಾಗಿ ಪಾತ್ರೆ ಹಾಗೂ ಇತರ ವಸ್ತುಗಳನ್ನು ಕೆಳೆದುಕೊಂಡವರಿಗೆ ಮೊದಲು ₹10 ಸಾವಿರ ಕೊಡುತ್ತಿದ್ದರು. ಇದೀಗ ಅದನ್ನೂ ಕೊಡುತ್ತಿಲ್ಲ. ದಯನೀಯ ಸ್ಥಿತಿಯನ್ನು ಕಾಂಗ್ರೆಸ್ ತಲುಪಿದೆ. ಇಷ್ಟಾಗಿಯೂ ದೊಡ್ಡದಾಗಿ ಭಾಷಣ ಮಾಡುತ್ತಾರೆ. ಬಡವರಿಗಾಗಿ ಬಹಳ ಮಾಡಿದ್ದೇವೆ ಎನ್ನುತ್ತೀರಿ, ಕೇವಲ ₹2 ಸಾವಿರ ಕೊಟ್ಟು ಕೈತೊಳೆದುಕೊಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ವೇತನಗಳು ಜನರಿಗೆ ಬರುತ್ತಿಲ್ಲ. ಯಾವುದೇ ಯೋಜನೆ ಇಲ್ಲದೇ ಗ್ಯಾರಂಟಿ ಯೋಜನೆಯೇ ಇದಕ್ಕೆ ಮೂಲ ಕಾರಣ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೇಳಿದರೆ ಅಧಿಕಾರಿಗಳು ದುಡ್ಡಿಲ್ಲ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಹೇಗೆ ಸರ್ಕಾರ ನಡೆಸುತ್ತಾರೆಯೋ ಎಂದು ಜೋಶಿ ಕಿಡಿಕಾರಿದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಮಾಜಿ ಶಾಸಕ ಅಮೃತ ದೇಸಾಯಿ, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಇತರರು ಇದ್ದರು.ಹತಾಶರಾಗಿ ಉದ್ಭವ ಠಾಕ್ರೆ ಬಾಲಿಶವಾಗಿ ಮಾತು
ಧಾರವಾಡ: ಹತಾಶರಾಗಿ ಉದ್ಭವ ಠಾಕ್ರೆ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಅವರ ಮಾತುಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶಿವಸೇನಾ ಮುಖಂಡ ಉದ್ಧವ ಠಾಕ್ರೆ ಅಹ್ಮದ ಶಾ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಪ್ರತಿಕ್ರಿಯೆ ನೀಡಿದ ಜೋಶಿ, ಪಾಕಿಸ್ತಾನ ಹಾಗೂ ಚೀನಾ ದೇಶಗಳನ್ನು ಸರಿಯಾಗಿ ನಿರ್ವಹಣೆ ಮಾಡಿರುವುದು ನರೇಂದ್ರ ಮೋದಿ ಹಾಗೂ ಅಮಿತ ಶಾ. ಯುಪಿಎ ಕಾಲದಲ್ಲಿ ಭಾರತದಲ್ಲಿ ಎಷ್ಟೆಲ್ಲ ಭಯೋತ್ಪಾದನೆ ಆಗಿರುವುದು ಗೊತ್ತಿರುವ ಸಂಗತಿ. ಹುಬ್ಬಳ್ಳಿ, ಹೈದರಾಬಾದ್, ಕೋಲ್ಕತ್ತಾ ಸೇರಿ ಹಲವು ಕಡೆ ಬಾಂಬ್ ಸ್ಫೋಟಗಳಾಗಿವೆ. ಆದರೆ, ಈಗ ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂಬಾಗಿಲಿನಿಂದ ಬಂದು ದಾಳಿ ನಡೆಸಿ ಓಡಿ ಹೋಗುತ್ತಿದ್ದಾರೆ. ಉಳಿದಂತೆ ದೊಡ್ಡ ಭಯೋತ್ಪಾದನೆ ಎಲ್ಲೂ ನಡೆಯುತ್ತಿಲ್ಲ. ನಾವು ಪಾಕಿಸ್ತಾನವನ್ನು ತಹಬದಿಯಲ್ಲಿ ಇಟ್ಟಿದ್ದೇವೆ ಎಂದರ್ಥ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್, ಚೀನಾ ದೇಶಗಳಿಗೆ ಸರಿಯಾದ ಮಾಹಿತಿ ಹೇಳಿ, ತಿಳಿವಳಿಕೆ ಹೇಳುವ ಕೆಲಸ ಮಾಡಿದೆ. ಯಾವಾಗ ಅವರು ಕೇಳೋದಿಲ್ಲವೋ ಆಗ ಏರ್ ಸ್ಟ್ರೈಕ್ ಸಹ ಮಾಡಿದ್ದೇವೆ. ಯುಪಿಎ ಕಾಲದಲ್ಲಿ ಇದಾಗಿತ್ತಾ ಎಂದು ಜೋಶಿ ಪ್ರಶ್ನಿಸಿದರು.