ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಹೊರಟಿರುವ ಮಸೂದೆ ಅಂಗೀಕಾರವನ್ನು ಇಂಡಿಯಾ ಒಕ್ಕೂಟ ತಡೆಯುವ ಮೂಲಕ ಮಹಿಳಾ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ಬುಸೀಗೌಡ ವೃತ್ತದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಸೀರೆ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಬಳಿಕ ಮಾತನಾಡಿದರು.

ಕೇಂದ್ರ ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸದ ವಿಪಕ್ಷಗಳು ಮಹಿಳೆಯರನ್ನು ಅವಮಾನಿಸುವ ಮೂಲಕ ಮಹಿಳಾ ವಿರೋಧಿಗಳು ಎಂದು ತೋರಿಸಿ ಮಹಿಳೆಯರ ಶಕ್ತಿ, ಸಾರ್ಮಥ್ಯವನ್ನು ಲಘುವಾಗಿ ಪರಿಗಣಿಸಿವೆ. ಆದರೆ, ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಈ ನಡೆಯನ್ನು ದೇಶದ ಮಹಿಳೆಯರು ಗಮನಿಸಿ, ಮಹಿಳಾ ವಿರೋಧಿ ಧೋರಣೆಯ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಮಹಿಳೆಯರು ಸಬಲರಾಗುವುದನ್ನು ಇಂಡಿಯಾ ಒಕ್ಕೂಟ ಸಹಿಸುತ್ತಿಲ್ಲ. ಜೊತೆಗೆ ಮುಂದಿನ ದಿನದಲ್ಲಿ ತಮ್ಮ ನಾಯಕತ್ವಕ್ಕೆ ಧಕ್ಕೆಯಾಗಬಹುದೆನ್ನುವ ಆತಂಕ ಎದುರಾಗಿದೆ. ಮಸೂದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಮಹಿಳೆಯರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಮರೆತಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಇದೇ ವೇಳೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಟೋರಿಕ್ಷಾ ಚಾಲಕರಿಗೆ ಸಮವಸ್ತ್ರ ಹಾಗೂ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದರ್ಶನ್ ಲಿಂಗರಾಜು, ಶಾಮಿಯಾನ ಪುಟ್ಟರಾಜು, ರಘು, ಕುಮಾರ್, ಶಿವಣ್ಣ, ರಾಜೇಶ್, ಆಟೋ ಶಿವು, ಕೃಷ್ಣ, ರವಿ, ಟೋಕನ್ ಮಂಜು, ಪುರಸಭೆ ಮಾಜಿ ಸದಸ್ಯರಾದ ಶಿವು, ಎಸ್.ಡಿ.ರಾಜು, ಶ್ರೀನಿವಾಸ್, ಪ್ರಭಾಕರ್, ಪುಟ್ಟರಾಮು, ಪ್ರಕಾಶ್, ಛಾಯದೇವಿ ಸೇರಿದಂತೆ ನೂರಾರು ಮಂದಿ ಇದ್ದರು.