ಘಟಕ ಆಧಾರಿತ ಪರೀಕ್ಷೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಹೊರೆ: ಹಣಮಂತ ನಿರಾಣಿ

| Published : Aug 12 2025, 12:33 AM IST

ಘಟಕ ಆಧಾರಿತ ಪರೀಕ್ಷೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಹೊರೆ: ಹಣಮಂತ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮೌಲ್ಯಮಾಪನ, ಮೌಲ್ಯಮಾಪನವೇ ಬೋಧನೆ ಎಂದು ಇತ್ತೀಚೆಗೆ ಸರ್ಕಾರ ಜಾರಿ ಮಾಡಿರುವ (Lesion Based Assessment) ಅಂದರೆ ಘಟಕ ಆಧಾರಿತ ಪರೀಕ್ಷೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮೌಲ್ಯಮಾಪನ, ಮೌಲ್ಯಮಾಪನವೇ ಬೋಧನೆ ಎಂದು ಇತ್ತೀಚೆಗೆ ಸರ್ಕಾರ ಜಾರಿ ಮಾಡಿರುವ (Lesion Based Assessment) ಅಂದರೆ ಘಟಕ ಆಧಾರಿತ ಪರೀಕ್ಷೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದರು.

ವಿಧಾನ ಪರಿಷತ್ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆಗಳ ತಯಾರಿಕೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ನಂತರ ಅಂಕ ತಂತ್ರಾಂಶದಲ್ಲಿ ಇಂದೀಕರಿಸುವುದು ಹಾಗೂ ಇನ್ನಷ್ಟು ಪ್ರಕ್ರಿಯೆ ಒಳಗೊಂಡಿದೆ. ಆದರೆ ಇದೆಲ್ಲವನ್ನು ಶಿಕ್ಷಕರೇ ಮಾಡುತ್ತಾ ಕುಳಿತರೆ ಬೋಧನೆಗೆ ಸಮಯವಕಾಶ ಸಿಗದಂತಾಗುತ್ತದೆ. ಈ ವಿಷಯ ಸರ್ಕಾರದ ಗಮನಕ್ಕೆ ಬಾರದೆ ಇರುವುದು ನೋವಿನ ಸಂಗತಿಯಾಗಿದೆ. ಇದರಿಂದ ಮಕ್ಕಳು ಭಯಗೊಂಡು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ, ಸರ್ಕಾರದ ಇಂತಹ ನಿರ್ಧಾರಗಳಿಂದ ಮಕ್ಕಳ ಬೆಳವಣಿಗೆಯಲ್ಲಿ ಏರುಪೇರುಗಳಾಗುತ್ತಿರುವುದನ್ನು ಸರ್ಕಾರ ಗಮನಿಸಬೇಕಾದ ಅಂಶವಾಗಿದೆ. ಒಂದು ವರ್ಷಕ್ಕೆ ಪ್ರತಿ ಶಿಕ್ಷಕನಿಗೆ 2025-26ನೇ ಸಾಲಿನಲ್ಲಿ 242 ದಿನಗಳು ಲಭ್ಯವಾಗುತ್ತಿವೆ. ಒಟ್ಟು 350 ಪಾಠಗಳು 8 9 & 10ನೇ ತರಗತಿಗಳಿವೆ. ಕನ್ನಡ ಶಿಕ್ಷಕರು 66, ಇಂಗ್ಲಿಷ್ ಶಿಕ್ಷಕರು 60, ಹಿಂದಿ ಶಿಕ್ಷಕರು 51, ಗಣಿತ ಶಿಕ್ಷಕರು 39, ವಿಜ್ಞಾನ ಶಿಕ್ಷಕರು 38, ಸಮಾಜ ವಿಜ್ಞಾನ ಶಿಕ್ಷಕರಂತೂ 96 ಪರೀಕ್ಷೆ ನಡೆಸಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸಿದ್ಧತೆ, ಮುದ್ರಣ ಸಂಘಟನೆ, ಮೌಲ್ಯಮಾಪನ ಅಂಕಗಳನ್ನು ಅಂತರ್ಜಾಲದಲ್ಲಿ ಇಂದೀಕರಿಸುವುದು. ಘಟಕ ಆಧಾರಿತ ಪರೀಕ್ಷೆಯ ಜೊತೆಗೆ ಪ್ರತಿ ವಿಷಯದ ಶಿಕ್ಷಕರು 4 ರೂಪನಾತ್ಮಕ ಪರೀಕ್ಷೆಗಳು 2 ಸಂಕಲನಾತ್ಮಕ ಪರೀಕ್ಷೆಗಳು ಮತ್ತು 10ನೇ ತರಗತಿಗೆ 2-3 ಸರಣಿ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯೂ ಇವರ ಮೇಲಿದೆ. ಶಿಕ್ಷಕರುಗಳು ಮಕ್ಕಳ ಜೊತೆಗೆ ಬೆರೆತು ಮಕ್ಕಳ ಭಾವನೆ ಅರಳಿಸಬೇಕಾಗುತ್ತದೆ. ಭಾರತೀಯ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಮಹೋನ್ನತ ಗೌರವವಿದೆ. ಸರ್ಕಾರ ಮತ್ತು ನಾವು ಕೂಡ ಗೌರವದಿಂದ ಕಾಣಬೇಕು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಎಲ್.ಬಿ.ಎ ಆದೇಶಕ್ಕೆ ಸಂಬಂದಿಸಿದಂತೆ ಪರೀಕ್ಷೆ ಸಂಘಟಿಸಲು ಮುದ್ರಣ ವೆಚ್ಚ, ಅಂತರ್ಜಾಲದಲ್ಲಿ ಇಂದಿಕರಿಸಲು ತಜ್ಞ ಸಿಬ್ಬಂದಿಯ (ಕಚೇರಿ ಸಹಾಯಕರು) ಸರ್ಕಾರವು ಒದಗಿಸಿದೆಯೇ? ಪರೀಕ್ಷೆಗಳನ್ನು ಸಂಘಟಿಸಲು ಬೇಕಾಗುವ ವೆಚ್ಚವನ್ನು ನಿರ್ವಹಿಸಲು ಮುಖ್ಯ ಶಿಕ್ಷಕರಿಗೆ ಸರ್ಕಾರವು ಅನುದಾನವನ್ನು ಒದಗಿಸಿದೆಯೇ? ಇಲ್ಲವಾದರೆ ಎಲ್.ಬಿ.ಎ ಗೆ ತಗಲುವ ವೆಚ್ಚವನ್ನು ಮಕ್ಕಳ ಮೇಲೆ ಭರಿಸಲು ಸರ್ಕಾರ ಆದೇಶವೇನಾದರೂ ಮಾಡಿದೆಯೇ? ಇಂಥ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ತ್ರಿಶಂಕು ಸ್ಥಿತಿಯಲ್ಲಿದ್ದು, ಆತನ ನೋವು ಕೇಳುವವರು ಯಾರು? ಇಲ್ಲವಾದರೆ ಆತ ಕೈಲಿಂದ ಬರಿಸಬೇಕೇ? ಈ ಕುರಿತು ಸರ್ಕಾರ ಸ್ಪಷ್ಟವಾಗಿ ಉತ್ತರ ಒದಗಿಸಬೇಕು. ಕೂಡಲೇ ಸರ್ಕಾರ ಈ ವಿಷಯವಾಗಿ ಗಂಭೀರವಾಗಿ ಮತ್ತೊಮ್ಮೆ ಪರಿಶೀಲಿಸಿ ಸದನದಲ್ಲಿ ಉತ್ತರಿಸಿ, ಈಗಾಗಲೇ ಹೊರಡಿಸಿದ ಆದೇಶ ಹಿಂಪಡೆಯಬೇಕು ಎಂದು ಸರ್ಕಾರ ಮತ್ತು ಪ್ರೌಢಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.