- ತುಗ್ಗಲಹ‍ಳ್ಳಿ-ತಾಲೂಕು ಕಚೇರಿಗೆ ಪಾದಯಾತ್ರೆ । ಶಾಸಕರ ನೇತೃತ್ವ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರು ಮತ್ತು ಕಾಯ್ದೆ ತಿದ್ದುಪಡಿ ಮಾಡಿ ಬಡವರು ಮತ್ತು ಕೂಲಿ ಕಾರ್ಮಿಕರ ವಿರೋಧಿಯಾದ ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ಕಾಂಗ್ರೆಸ್ ಸರ್ಕಾರ ಉಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.

ವಿಬಿ- ಜಿ ರಾಮ್ ಜಿ ಯೋಜನೆ ಜನವಿರೋಧಿಯಾಗಿದೆ. ಈ ಬಗ್ಗೆ ತಾಲೂಕಿನ ಜನತೆಯಲ್ಲಿ ಜಾಗೃತಿ ಮೂಡಿಸಲು ಹಾಗೂ ಈ ಯೋಜನೆ ಜಾರಿಗೆ ತಾರದಂತೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಸಲುವಾಗಿ ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ತುಗ್ಗಲಹ‍ಳ್ಳಿಯಿಂದ ಹೊನ್ನಾಳಿ ತಾಲೂಕು ಕಚೇರಿಗೆ ನಡೆದ ಪಾದಯಾತ್ರೆ ವೇಳೆ ಅವರು ಮಾತನಾಡಿದರು.


ಬಡವರು ಉದ್ಯೋಗಕ್ಕಾಗಿ ವಲಸೆ ಹೋಗಬಾರದು, ಅವರಿಗೆ ಅನ್ನ- ಉದ್ಯೋಗದ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದರು. ಇದೀಗ ಕೇಂದ್ರದ ಬಿಜೆಪಿ ಸರ್ಕಾರ ಈ ಯೋಜನೆಯ ಹೆಸರನ್ನು ಹಾಗೂ ಕಾಯ್ದೆ ಬದಲಿಸಲು ಹೊರಟಿದೆ. ಜನತೆ ಇದನ್ನು ಉಗ್ರವಾಗಿ ಖಂಡಿಸಬೇಕು ಎಂದು ತಿಳಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ 5 ಗ್ಯಾರಂಟಿ ಹಾಗೂ ಸರ್ಕಾರದ ಸಾವಿರ ದಿನಗಳ ಅಡಳಿತದ ಸಲುವಾಗಿ ಹಾವೇರಿಯ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಮೂಲಕ ರೈತರು, ಬಡವರಿಗೆ ಅನುಕೂಲ ಆಗುವಂತಹ ಅನೇಕ ಸೌಲಭ್ಯಗಳನ್ನು ತಲುಪಿಸಿದೆ ಎಂದರು.

ಕೆಪಿಸಿಸಿ ಸದಸ್ಯ ಡಾ. ಎಲ್.ಈಶ್ವರ ನಾಯ್ಕ, ಒಬಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಕೊಡತಾಳ್ ರುದ್ರೇಶ್, ಮಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅರಕೆರೆ ಮಧು, ಮಹಿಳಾ ಅಧ್ಯಕ್ಷೆ ಪುಷ್ಪಾ ರವೀಶ್, ವಿಜಯೇಂದ್ರಪ್ಪ, ಎಚ್.ಬಿ. ಅಣ್ಣಪ್ಪ, ಬೆನಕನಹಳ್ಳಿ ವೀರಣ್ಣ, ಮಾಜಿ ಸೈನಿಕ ವಾಸಪ್ಪ ಸೇರಿದಂತೆ ಹಲವಾರು ಮುಖಂಡರು ಇದ್ದರು.

ತಾಲೂಕಿನ ತುಗ್ಗಲಹಳ್ಳಿಯಿಂದ ಹೊರಟ ಪಾದಯಾತ್ರೆ ಎಚ್.ಕಡದಕಟ್ಟೆ, ಸೊರಟೂರು, ಅಪ್ಪರ್ ತುಂಗಾ, ಹಿರೇಕಲ್ಮಠ ನಂತರ ತಾಲೂಕು ಕಚೇರಿಗೆ ಅಗಮಿಸಿತು. ಕಂದಾಯ ಇಲಾಖೆಯ ಗ್ರೇಡ್ -2 ತಹಸೀಲ್ದಾರ್ ಸುರೇಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

- - -

-19ಎಚೆ.ಎಲ್.ಐ1: ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿದರು.