ದೇಶದ ಸುರಕ್ಷತೆಗೆ ಸರ್ವರ ಒಂದಾಗುವಿಕೆ ಅನಿವಾರ್ಯ

| Published : May 03 2025, 12:18 AM IST

ಸಾರಾಂಶ

ಬಸವಣ್ಣ ಹೋಮ-ಹವನ ವಿರೋಧ ಮಾಡಿದರೆಂದು ಅಪಪ್ರಚಾರ ಮಾಡಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ದೇಶ ಸನಾತನ ಧರ್ಮದಡಿ ನಡೆಯುತ್ತಿದೆ. ಎಲ್ಲ ಧರ್ಮಗಳಿಗೂ ಧರ್ಮ ಗುರುಗಳಿದ್ದರೆ, ಸನಾತನ ಧರ್ಮವನ್ನು ಸ್ವತ ಭಗವಂತನೆ ಸೃಷ್ಟಿಸಿದ ಧರ್ಮವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಸುಕ್ಷೇತ್ರ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಡೆಯ ಶಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕೇಸರಿ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಕೇಸರಿ ಎಂದರೇ ತ್ಯಾಗ, ನಿಷ್ಠೆ, ಸನಾತನ ಧರ್ಮದ ಸಂಕೇತವಾಗಿದೆ. ಸಂಕಷ್ಟ ನಿವಾರಣೆ ಮಾಡುವ ದೇವರು ಹನುಮಂತ. ಆತನನ್ನು ಕೂಡ ಕೇಸರಿ ನಂದನ ಎನ್ನುತ್ತಾರೆ. ಹಣಮಂತ ಇಲ್ಲದ ಊರೇ ಇಲ್ಲ ಎಂದರು.

ಸಮಾಜದಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಬಸವಣ್ಣನವರು ಕ್ರಾಂತಿ ಮಾಡಿದರು. ಅವರ ವಚನಗಳಲ್ಲಿ ಎಲ್ಲಿಯೂ ಪಂಚಪೀಠಗಳ ವಿರುದ್ಧವಿಲ್ಲ, ಮೂಢನಂಬಿಕೆಗಳ ವಿರುದ್ಧ ಇವೆ. ಆದರೆ, ಕೆಲವರು ಪಂಚಪೀಠ ಬೇರೆ, ಅವರು ವೈದಿಕರು, ಹೋಮ ಹವನ ಮಾಡುತ್ತಾರೆ. ಬಸವಣ್ಣ ಹೋಮ-ಹವನ ವಿರೋಧ ಮಾಡಿದರೆಂದು ಅಪಪ್ರಚಾರ ಮಾಡಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಕೂಡಿಸುವ ಕೆಲಸ ಬೊಮ್ಮನಹಳ್ಳಿ ಗ್ರಾಮದವರಿಂದ ನಡೆಯುತ್ತಿದೆ ಎಂದರು.

ಸಮಸ್ತ ಹಿಂದೂಗಳು ಏನೇ ಬೇಧ-ಭಾವ ಇದ್ದರೂ ಒಂದಾಗಿ ಜೀವನ ಮಾಡುವ ಅಗತ್ಯವಿದೆ. ಪಶ್ಚಿಮ ಬಂಗಾಳ, ಕಾಶ್ಮೀರ್ ಪರಿಸ್ಥಿತಿ ನೋಡಿ. ಹಿಂದೂ ಧರ್ಮ ಉಳಿವಿಗಾಗಿ, ಹಿಂದೂಗಳ ರಕ್ಷಣೆಗಾಗಿ, ಭಾರತ ದೇಶದ ಸುರಕ್ಷತೆಗಾಗಿ ನಾವೆಲ್ಲ ಒಂದಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದರು. ದಲಿತ-ಮುಸ್ಲಿಮರು ಬಾಯಿ ಬಾಯಿ ಎನ್ನುತ್ತಾರೆ. ಅದು ಎಂದಿಗೂ ಸಾಧ್ಯವಿಲ್ಲ. ಭಾರತ-ಪಾಕಿಸ್ತಾನ ಒಡೆಯಲು ಡಾ.ಅಂಬೇಡ್ಕರ್ ವಿರೋಧ ಮಾಡಿದ್ದರು. ಕೊನೆಗೆ ಒಡೆಯುವುದೇ ಆಗಿದ್ದರೆ, ನಮ್ಮ ದೇಶದಲ್ಲಿರುವ ಮುಸ್ಲಿಮರು ಅಲ್ಲಿಗೆ ಹೋಗಲಿ, ಪಾಕಿಸ್ತಾನ್ ದಲ್ಲಿರುವ ಹಿಂದೂಗಳು ಭಾರತಕ್ಕೆ ಬರಲಿ ಎಂದಿದ್ದರು. ಈ ದೇಶಕ್ಕೆ ಅವರು ಎಂದೂ ನಿಷ್ಠೆ ಆಗಿ ಇರಲ್ಲ ಎಂದರು.

ಗುರುಶಾಂತ ಮಹಾಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಎಂ.ಎಸ್.ರುದ್ರಗೌಡರ, ಅಣ್ಣಾರಾಯ ಪಾಟೀಲ, ಗುರುಪಾದಪ್ಪ ಮುರಗುಂಡಿ, ಭೀಮರಾಯ ಬಿರಾದಾರ, ನಾನಾಗೌಡ ಬಿರಾದಾರ, ಸಿದ್ದರಾಮ ದಾಶ್ಯಾಳ, ಮುರಗೆಪ್ಪ ಕೋಳೂರಗಿ, ಮಲ್ಲಪ್ಪ ಬಿರಾದಾರ, ಮಾದೇವ ಬಿರಾದಾರ, ಈರಯ್ಯ ಹಿರೇಮಠ, ವಿರುಪಾಕ್ಷಗೌಡ ಪಾಟೀಲ, ಅಪ್ಪುಗೌಡ ಪಾಟೀಲ ಮುಂತಾದವರು ಇದ್ದರು.