ಎನ್‌ಡಿಎ ವಿರುದ್ಧ ಪರಿಶಿಷ್ಟರ ಒಗ್ಗಟ್ಟು: ಸುಧಾಮದಾಸ್‌

| Published : Apr 17 2024, 01:21 AM IST

ಎನ್‌ಡಿಎ ವಿರುದ್ಧ ಪರಿಶಿಷ್ಟರ ಒಗ್ಗಟ್ಟು: ಸುಧಾಮದಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರದ ಸಂವಿಧಾನ ವಿರೋಧಿ ನಡೆ, ಶೋಷಿತರ ಮೀಸಲಾತಿ ಮೊಟಕು ಹಾಗೂ ಖಾಸಗೀಕರಣದ ಮೂಲಕ ಉದ್ಯೋಗ ಕಸಿಯುತ್ತಿರುವ ನೀತಿ ವಿರೋಧಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನತೆ ಬಿಜೆಪಿ ಮೈತ್ರಿ ಕೂಟ ಸೋಲಿಸಲು ಮುಂದಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಎನ್‌ಡಿಒ ಒಕ್ಕೂಟವನ್ನು ಅಧಿಕಾರದಿಂದ ದೂರವಿಟ್ಟು, ಸಂವಿಧಾನ ವಿರೋಧಿ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಗುರಿಯೊಂದಿಗೆ ಪರಿಶಿಷ್ಟ ಸಮುದಾಯ ಒಗ್ಗೂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮದಾಸ್ ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರದ ಸಂವಿಧಾನ ವಿರೋಧಿ ನಡೆ, ಶೋಷಿತರ ಮೀಸಲಾತಿ ಮೊಟಕು ಹಾಗೂ ಖಾಸಗೀಕರಣದ ಮೂಲಕ ಉದ್ಯೋಗ ಕಸಿಯುತ್ತಿರುವ ನೀತಿ ವಿರೋಧಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನತೆ ಬಿಜೆಪಿ ಮೈತ್ರಿ ಕೂಟ ಸೋಲಿಸಲು ಮುಂದಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿರುವ ಪರಿಶಿಷ್ಟ ಜಾತಿಯ ೧೬೦೬, ಪರಿಶಿಷ್ಟ ವರ್ಗದ ೧೧೦೦ ಹಾಗೂ ಹಿಂದುಳಿದ ವರ್ಗದ ೩೪೭೮ ಜಾತಿಯ ಜನತೆ ಒಗ್ಗೂಡಿ ರೈತರು, ದಲಿತ, ಕಾರ್ಮಿಕ, ಸಂವಿಧಾನ ವಿರೋಧಿಯಾಗಿರುವ ಬಿಜೆಪಿ ಸರ್ಕಾರವನ್ನು ಸೋಲಿಸಲು ಮುಂದಾಗಿದ್ದು, ಆ ಹಿನ್ನೆಲೆಯಲ್ಲಿ ಅಹಿಂದ ವರ್ಗದ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ನರೇಂದ್ರ ಮೋದಿ ಅವರ ಸಂವಿಧಾನ ವಿರೋಧಿ ನಡೆ ಪ್ರಧಾನ ಮಂತ್ರಿ ಹುದ್ದೆಯ ಘನತೆಗೆ ತಕ್ಕದ್ದಲ್ಲ. ಮೇಲ್ವರ್ಗದ ಜನತೆಗೆ ಶೇ.೧೦ ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರತಿಪಕ್ಷಗಳನ್ನು ಸಂಸತ್ತಿನಿಂದ ಹೊರಗಿಟ್ಟು ಮಂಡನೆ ಮಾಡಿ ರಾತ್ರೋರಾತ್ರಿ ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆಯಲಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ರಾಜಕೀಯ ವಿರೋಧಿ ಎಂಬ ಕಾರಣಕ್ಕೆ ಭ್ರಷ್ಟಾಚಾರದ ಆರೋಪದಡಿ ಬಂಧಿಸಲಾಗಿದೆ. ರಾಜಕೀಯ ದುರುದ್ದೇಶದಿಂದ ಹಿಟ್ಲರ್, ಮುಸಲೋನಿ ರೀತಿ ಪ್ರಧಾನಿ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ರೈತರು ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ೫೫ ಲಕ್ಷ ಕೋಟಿ ಸಾಕಾಗಲಿದೆ. ಆದರೆ, ಇದನ್ನು ಮಾಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಬಾನಿ, ಅದಾನಿಯವರ ತೆರಿಗೆ ಮನ್ನಾ ಮಾಡಿ ಬಂಡವಾಳಶಾಹಿಗಳ ಪರ ನಿಂತು ರೈತರಿಗೆ ದ್ರೋಹ ಮಾಡಿದ್ದಾರೆ. ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಿಲ್ಲ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಅಹಿಂದ ವರ್ಗದ ಜನತೆಗೆ ಯಾವುದೇ ಸಹಾಯಧನ ನೀಡುತ್ತಿಲ್ಲ, ಸರ್ಕಾರಿ ಉದ್ಯೋಗದಲ್ಲಿ ವರ ಗುತ್ತಿಗೆ ಜಾರಿಗೊಳಿಸಿ ಉದ್ಯೋಗ ಕಡಿತ ಮಾಡಲಾಗುತ್ತಿದೆ, ರೈಲ್ವೆ ಇಲಾಖೆಯಲ್ಲಿ ಖಾಸಗೀಕರಣ ಪದ್ಧತಿ ಜಾರಿ ಮಾಡಿ ಸುಮಾರು ನಾಲ್ಕು ಲಕ್ಷ ಬ್ಯಾಕ್‌ ಲಾಕ್ ಉದ್ಯೋಗ ಕಡಿತ ಮಾಡಲಾಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಮುಖಂಡರಾದ ಅಂಬಣ್ಣ ಶ್ರೀನಿವಾಸ್, ಅಪ್ಪಣ್ಣ ಇತರರಿದ್ದರು.