ಸಾರಾಂಶ
ಶಿವಮೊಗ್ಗ: ಸಿಗಂದೂರು ಕ್ಷೇತ್ರದ ಮೇಲೆ ಅನಗತ್ಯ ಹಸ್ತಕ್ಷೇಪ ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದರು.
ಮಲೆನಾಡಿನ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ಮೂಲ ಸ್ಥಾನದಲ್ಲಿ ಮಂಗಳವಾರ ಧರ್ಮ ಜ್ಯೋತಿಗೆ ಚಾಲನೆ ನೀಡಿ ಬಳಿಕ ದೇವಸ್ಥಾನದಲ್ಲಿ ನಡೆದ ಸಿಗಂದೂರು ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಗಂದೂರು ಕ್ಷೇತ್ರದ ಜೊತೆಗೆ ನಿರಂತರವಾಗಿ ಸಮಾಜ ಇರಲ್ಲಿದ್ದು, ಯಾವುದೇ ಕಾರಣಕ್ಕೂ ಕ್ಷೇತ್ರದ ಮೇಲೆ ಅನಗತ್ಯ ಹಸ್ತಕ್ಷೇಪ ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದರು.ಧರ್ಮಾಧಿಕಾರಿ ಡಾ.ಎಸ್ ರಾಮಪ್ಪನವರು ಮಾತನಾಡಿ, ನಮ್ಮ ಅಜ್ಜನ ಕಾಲದಿಂದಲೂ ಚೌಡಮ್ಮನನ್ನು ನಮ್ಮ ಮನೆಯ ದೇವರಾಗಿ ಆರಾಧಿಸಿಕೊಂಡು ಬಂದಿದ್ದು, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಆದ ನಂತರ ಈಗಿನ ಮೂಲ ಸ್ಥಾನ ಅಂದರೆ " ಸೀಗೆ ಕಣಿವೆ " ಶರಾವತಿ ಹಿನ್ನೀರಿನಿಂದ ಸಂಪೂರ್ಣ ಜಲಾವೃತವಾದ ನಂತರ ಅಲ್ಲಿಂದ ದೇವಿಯನ್ನು ಈಗಿನ ಸಿಗಂದೂರು ಎಂಬಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿ, ಪ್ರತೀ ವರ್ಷ ಮಕರ ಸಂಕ್ರಮಣದಂದು ದೇವಿಯ ಮೂಲ ಸ್ಥಾನಕ್ಕೆ ತೆರಳಿ ಹೋಮ ಹವನಗಳ ಜೊತೆಗೆ ವಿಶೇಷವಾಗಿ ಧರ್ಮಜ್ಯೋತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆಯ ಮೂಲಕ ಸಂಪೂರ್ಣ ಕುಂಭ ಕಲಶ ಸಮೇತವಾಗಿ ಈಗಿರುವ ದೇವಸ್ಥಾನಕ್ಕೆ ಬರಲಾಗುತ್ತದೆ. ಇದೆ ಮಕರ ಸಂಕ್ರಮಣದ ಜಾತ್ರಾ ವಿಶೇಷ ಎಂದು ತಿಳಿಸಿದರು.
ಹೊಸನಗರ ಕಾರ್ತೀಕೇಯ ಯೋಗೇಂದ್ರ ಅವದೂತ ಸ್ವಾಮೀಜಿ ಮಾತನಾಡಿ, ಸಂಕ್ರಾಂತಿಯು ನಾಡಿನ ಜನತೆಗೆ ಸಮೃದ್ಧಿಯ ಸಂಕೇತವಾಗಿದೆ. ಮಾನವನ ಅಂಧ ಶ್ರಧ್ಧೆ ನಿವಾರಿಸಿ ಸರ್ವರಿಗೂ ಒಳಿತಿನ ಹಾದಿಯನ್ನು ಆಪೇಕ್ಷಿಸುವ ಎಲ್ಲರ ಹಬ್ಬವಾಗಿದೆ ಎಂದರು.ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್ ಮಾತನಾಡಿ, ಹಿನ್ನೀರಿನ ಜನರ ಪಾಲಿಗೆ ಸಂಜೀವಿನಿಯಂತೆ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ ಮತ್ತು ಚೌಡಮ್ಮನ ಆಗ್ರಹ ಇವೆರಡೂ ಮನೆ, ಮಠಗಳನ್ನು ಕಳೆದುಕೊಂಡ ಶರಾವತಿ ಸಂತ್ರಸ್ತರ ಬದುಕಿಗೆ ಹೊಸ ಭರವಸೆ ಮೂಡಿಸುವಂತಾಗಿದೆ ಎಂದರು. ರಾಜ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಹಿಂದುಳಿದ ವರ್ಗಗಳ ಆಸ್ತಿಯಾಗಿರುವ, ನಾರಾಯಣಗುರುಗಳ ತತ್ವ ಆದರ್ಶಗಳನ್ನು ಸಾರುವ ಸಿಗಂದೂರು ದೇವಾಲಯವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇದೇ ವೇಳೆ ಸಿಗಂದೂರು ಶ್ರೇಷ್ಠ ಸಾಧಕಿ ಪ್ರಶಸ್ತಿಯನ್ನು ದೀಕ್ಷಿತ್ ಹೆರೆನಲ್ಲೂರು ಅವರಿಗೆ ಮತ್ತು ಸಿಗಂದೂರು ನಾಟ್ಯಸಿರಿ ಪ್ರಶಸ್ತಿಯನ್ನು ಬೆಂಗಳೂರು ನ್ಯಾಯವಾದಿ ದಯಾನಂದ ಸರಸ್ವತಿ ರವರ ಪುತ್ರಿ ರಚನಾ ಅವರಿಗೆ ನೀಡಿ ಗೌರವಿಸಲಾಯಿತು.ಮೊದಲ ದಿನದ ಜಾತ್ರಾಪ್ರಯುಕ್ತ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಪ್ರಧಾನ ಪುರೋಹಿತರಾದ ರಘುಪತಿ ಶಾಂತಿ ಅವರ ಆಚಾರತ್ವದಲ್ಲಿ ನೆರವೇರಿತು.ಅಕ್ಕಪಕ್ಕದ ಊರಿನ ಮಹಿಳೆಯರು ಸರದಿ ಸಾಲಿನಲ್ಲಿ ಕುಂಬ ಕಲಶವನ್ನು ಹೊತ್ತು ಜ್ಯೋತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ತಾಲ್ಲೂಕಿನಿಂದ ಹಲವು ಕಲಾ ತಂಡಗಳು ಧರ್ಮಜ್ಯೋತಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷೆ ರಾಮಚಂದ್ರ. ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ, ಗಣೇಶ್ ಜಾಕಿ, ಜಿಲ್ಲಾ ಈಡಿಗ ಸಂಗದ ಅಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ, ಗಣಪತಿ ಮಡೆನೂರು, ಮ್ಯಾಕ್ಸ್ ಆಸ್ಪತ್ರೆಯ ಡಾ.ಪ್ರಭು ಮತ್ತಿತರರಿದ್ದರು. ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಶಿವಮೊಗ್ಗ: ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು.
ಮಂಗಳವಾರ ಬೆಳಗ್ಗೆ 5 ರಿಂದ ದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅರ್ಚನೆ ದೇವಿಯ ಮೂಲ ಸ್ಥಾನದಲ್ಲಿ ನವ ಚಂಡಿಕಾ ಹೋಮ ನೆರವೇರಿತು. ಹೋಮ ಹವನ ಪೂರ್ವಹುತಿಯಲ್ಲಿ ಧರ್ಮಾಧಿಕಾರಿ ಡಾ.ಎಸ್. ರಾಮಪ್ಪನವರು ಕುಟುಂಬ ಸಮೇತರಾಗಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.ಹರಿದು ಬಂದ ಭಕ್ತರು:
ಮೊದಲ ದಿನದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು. ಅಕ್ಕಿ, ಬೆಲ್ಲ ವಿವಿಧ ಸೇವೆ ನೀಡಿ ಹರಕೆ ಪೂಜೆ ಸಲ್ಲಿಸಿ. ಮುಡಿಗಂಧ ಪ್ರಸಾದ ಸ್ವೀಕರಿಸಿದರು.ವಿವಿಧ ಧಾರ್ಮಿಕ ಕಾರ್ಯಕ್ರಮಗಳು:
ಸೀಗೇ ಕಣಿವೆಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು, ಚೌಡೇಶ್ವರಿ ದೇವಿಗೆ ಉಘೇ ಉಘೇ ಎಂದು ಈಗಿನ ಸಿಗಂದೂರಿನತ್ತ ಹೆಜ್ಜೆ ಹಾಕಿದರು. ಸಿಗೇ ಕಣಿವೆಯ ಮೂಲ ಸ್ಥಾನದಲ್ಲಿ ದೇವಿಯ ಉದ್ಭವ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಅಖಂಡ ಜ್ಯೋತಿ ಮೆರವಣಿಗೆಗೆ ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಅವರ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಚಾಲನೆ ನೀಡಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಅಥಿತಿಗಳಾಗಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ ಪಿ ಪಿ.ವೀರೇಂದ್ರ ಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡೀಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ಈಡೀಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕೆಡಿಪಿ ಸದಸ್ಯ ಸತ್ಯನಾರಾಯಣ ಸತ್ಯನಾರಾಯಣ.ಜಿ.ಟಿ, ತಾಲೂಕು ಪಶು ವೈದ್ಯಕೀಯ ನಾಮ ನಿರ್ದೇಶಕ ಸದಸ್ಯ ಗಣೇಶ ಜಾಕಿ ಮತ್ತಿತರರಿದ್ದರು.
ಆನ್ನ ದಾಸೋಹದಲ್ಲಿ ತುಂಬಿ ತುಳಿಕಿದ ಭಕ್ತರು:ಪ್ರಥಮ ದಿನದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ದೇವಸ್ಥಾನ ಸಮಿತಿಯಿಂದ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.
ಲಾಂಚ್ ನಲ್ಲಿ ಹೆಚ್ಚಿದ ಜನ ದಟ್ಟಣೆ:ಮಂಗಳವಾರ ಜಾತ್ರಾ ಮಹೋತ್ಸವದ ಪ್ರಥಮ ದಿನ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಟ್ಯಾಕ್ಸಿ, ಬಸ್ಸು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದರು. ಅಂಬಾರಗೊಡ್ಲು ಲಾಂಚ್ ತಟದಲ್ಲಿ ವಾಹನ ನಿಲ್ಲಿಸಿ, ಹೊಳೆಬಾಗಿಲು ಲಾಂಚ್ ಮೂಲಕ ಸಿಗಂದೂರು ದೇವಸ್ಥಾನ ಭಾಗಕ್ಕೆ ಬಂದರು. ಜನ ದಟ್ಟಣೆ ಹೆಚ್ಚು ಹಿನ್ನೆಲೆಯಲ್ಲಿ ಭಕ್ತರು. ಸ್ಥಳೀಯರು ಪ್ರಯಾಣ ಮಾಡಲು ಹರ ಸಾಹಸ ಪಟ್ಟರು.