ಸಾರಾಂಶ
ಎಂ.ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣಚಿಕ್ಕ ಚಿಕ್ಕ ನಿವೇಶನದಾರರಿಗೆ ಸಣ್ಣಪುಟ್ಟ ದಾಖಲಾತಿಗಳ ದೋಷಗಳನ್ನು ಹುಡುಕಿ ನೋಟಿಸ್ ನೀಡುವ ಮೂಲಕ ಮುಲಾಜಿಲ್ಲದೆ ಮನೆ ತೆರವುಗೊಳಿಸುವ ಅಧಿಕಾರಿಗಳು, ಕಾನೂನು ಬಾಹಿರವಾಗಿ ಐಷಾರಾಮಿ ಅಪಾರ್ಟ್ಮೆಂಟ್ ಮತ್ತು ಬಹುಮಹಡಿ ಕಟ್ಟಡಗಳು ನಿರ್ಮಾಣ ಮಾಡುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿಕಾರಿಪಾಳ್ಯದ ಸುತ್ತಮುತ್ತಲಿನ ಹಲವೆಡೆ ಕಟ್ಟಡ ನಕಾಶೆ, ಕಟ್ಟಡ ಪ್ರಾರಂಭ ಪ್ರಮಾಣಪತ್ರ, ಆಕ್ಯುಪೆನ್ಸಿ ಪ್ರಮಾಣಪತ್ರ ಪಡೆಯದೆ ನೂರಾರು ಅನಧಿಕೃತ ಅಪಾರ್ಟ್ಮೆಂಟ್‌ಗಳು ಹಾಗೂ ಬಹುಮಹಡಿ ಕಟ್ಟಡಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಆದ್ದರೂ ಹುಲಿಮಂಗಲ ಗ್ರಾಮಪಂಚಾಯಿತಿ ಅಧಿಕಾರಿಗಳ ಜಾಣಕುರುಡು ಪ್ರದರ್ಶನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಿರ್ಮಾಣಗೊಂಡಿರುವ ಅನೇಕ ಅಪಾರ್ಟ್ಮೆಂಟ್‌ಗಳು ಪಟ್ಟಣ ಯೋಜನೆಯ ವತಿಯಿಂದ ಧೃಡಿಕೃತ ದಾಖಲೆಯೊಂದಿಗೆ ಅನುಮೋದನೆ ಪಡೆದಿಲ್ಲ, ಅಲ್ಲದೆ ಅನೇಕ ಅಪಾರ್ಟ್ಮೆಂಟ್‌ಗಳಲ್ಲಿ ಕೊಳಚೆ ನೀರು ಸಂಸ್ಕರಿಸಿ ಶುದ್ಧೀಕರಿಸುವ ಎಸ್‌ಟಿಪಿ ಅಳವಡಿಸಿಲ್ಲ. ಮೋರಿ ಹಾಗೂ ಒಳಚರಂಡಿ ಪೈಪ್ ಮೂಲಕ ಕಲುಷಿತ ನೀರು ಹರಿಬಿಡಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕೆಲವು ಅಪಾರ್ಟ್ಮೆಂಟ್‌ಗಳು ಬಿಎಂಆರ್‌ಡಿಎ ಹಾಗೂ ಬಿಡಿಎಯಿಂದ ಅನುಮೋದನೆ ಪಡೆದಿಲ್ಲದಿದ್ದರೂ ಈ ಅಪಾರ್ಟ್ಮೆಂಟ್‌ಗಳಿಗೆ ಪಂಚಾಯಿತಿಯಲ್ಲಿ ಓಸಿ ಮತ್ತು ಸಿಸಿ ಧೃಡಿಕರಣವಿಲ್ಲದೆ ಖಾತೆ ದಾಖಲಾಗಿದೆ. 50ಕ್ಕೂ ಹೆಚ್ಚಿನ ಪ್ಲಾಟ್‌ಗಳನ್ನು ಹೊಂದಿರುವ ಹತ್ತಾರು ಅಪಾರ್ಟ್ಮೆಂಟ್‌ಗಳು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡುತ್ತಿದ್ದರೂ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಚಿಕ್ಕ ಚಿಕ್ಕ ನಿವೇಶನಗಳಿಗೆ ಸಿಗದೇ ಇರುವ ನಕಾಶೆ ಮಂಜೂರಾತಿ, ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಹೇಗೆ ಅನುಮತಿ ನೀಡುತ್ತಾರೆ, ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಬೇರೆ ಕಾನೂನು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಕೂಡಲೇ ಜಿಲ್ಲಾಡಳಿತ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ಮೂಲಕ ಅನಧಿಕೃತ ಅಪಾರ್ಟ್ಮೆಂಟ್‌ಗಳ ದಾಖಲೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಲವು ಅಪಾರ್ಟ್ಮೆಂಟ್‌ಗಳಿಗೆ ಭೇಟಿ ನೀಡಿದಾಗ ಎಸ್.ಟಿ.ಪಿ ಇಲ್ಲದಿರುವುದು ಪತ್ತೆ ಆಗಿದೆ. ಅಪಾರ್ಟ್ಮೆಂಟ್‌ಗಳಿಗೆ ಮತ್ತು ಹುಲಿಮಂಗಲ ಗ್ರಾಪಂಗೆ ನೋಟಿಸ್ ನೀಡಿದ್ದಾರೆ. ಆದರೂ ಈವರೆಗೂ ಕ್ರಮಕೈಗೊಂಡಿಲ್ಲ.
---ಎಸ್.ಟಿ.ಪಿ ಅಳವಡಿಸದೆ ಅಪಾರ್ಟ್ಮೆಂಟ್ ನಿರ್ಮಾಣ ನನ್ನ ಗಮನಕ್ಕೆ ಬಂದಿಲ್ಲ, ಕೆಲವು ಕಡೆ ಅಪಾರ್ಟ್ಮೆಂಟ್ ಕಲುಷಿತ ನೀರನ್ನು ಒಳಚರಂಡಿ ಪೈಪ್‌ಗಳ ಮೂಲಕ ಹರಿಬಿಡಲಾಗುತ್ತಿದೆ. ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದ್ದರೆ ಪರಿಶೀಲನೆ ನಡೆಸಲಾಗುವುದು
-ಕೃಷ್ಣಪ್ಪ, ಪಿಡಿಒ, ಹುಲಿಮಂಗಲ ಗ್ರಾಪಂ.--
ಶಿಕಾರಿಪಾಳ್ಯ ಪ್ರದೇಶದಲ್ಲಿ ಶೇ.60ರಷ್ಟು ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಇಲ್ಲ. ಅಪಾರ್ಟ್ಮೆಂಟ್‌ಗಳ ಒಳಚರಂಡಿ ನೀರು ರಸ್ತೆಯ ಮೇಲೆಲ್ಲಾ ಹರಿದು ಶಿಕಾರಿಪಾಳ್ಯ ಕೆರೆ ಸೇರುತ್ತಿದೆ. ಜೀವನಾಡಿಯಾಗಿರುವ ಶಿಕಾರಿ ಪಾಳ್ಯ ಕೆರೆಗೆ ಕಾಯಕಲ್ಪ ದೊರೆಯುತ್ತಿಲ್ಲ.-ರಫೀಕ್, ಸ್ಥಳೀಯ ನಿವಾಸಿ