ಮಂಗಳೂರಿನ ಶೇ.50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ನೀರು: ಆರೋಪ

| Published : Jan 05 2025, 01:30 AM IST

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಮಾತನಾಡಿ, ತ್ಯಾಜ್ಯ ನೀರು ರಾಜಕಾಲುವೆಗಳಲ್ಲಿ ಹರಿಯುತ್ತಾ ನದಿಗಳನ್ನು ಸೇರುತ್ತಿದೆ. ಈ ಬಗ್ಗೆ ದೊಡ್ಡ ಸುಧಾರಣೆಯ ಅಗತ್ಯವಿದೆ. ಆದ್ದರಿಂದ ಆಡಳಿತ- ವಿಪಕ್ಷ ಸದಸ್ಯರನ್ನು ಸೇರಿಸಿಕೊಂಡು ತನಿಖೆಗೆ ಆದೇಶ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶೇ.50ರಷ್ಟು ಪ್ರದೇಶಗಳಿಗೆ ತುಂಬೆ ಡ್ಯಾಂನಿಂದ ಶುದ್ಧೀಕರಿಸದ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೇಳಿಬಂತು. ಈ ವಿಚಾರದ ಕುರಿತು ಆಡಳಿತ- ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧ ನಡೆದು ಕೋಲಾಹಲಕ್ಕೆ ಕಾರಣವಾಯಿತು.

ಅಲ್ಲದೆ, ಎಸ್‌ಟಿಪಿ ನಿರ್ವಹಣೆ ವೈಫಲ್ಯದಿಂದ ಒಳಚರಂಡಿ ತ್ಯಾಜ್ಯ ನೀರು ಸೇರಿ ನದಿಗಳು ಕಲುಷಿತ ಆಗುತ್ತಿರುವ ಬಗ್ಗೆಯೂ ಗಂಭೀರ ಚರ್ಚೆ ನಡೆದು, ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ತಂಡ ಎಸ್‌ಟಿಪಿಗಳ ಪರಿಶೀಲನೆ ನಡೆಸಿ ಕೊಳಚೆ ನೀರು ನದಿಗಳಿಗೆ ಸೇರುತ್ತಿರುವುದು ಕಂಡು ಬಂದರೆ ತನಿಖೆಗೆ ಆದೇಶಿಸುವುದಾಗಿ ಮೇಯರ್‌ ಭರವಸೆ ನೀಡಿದರು.

ಶುದ್ಧೀಕರಿಸದೆ ನೀರು ವಿತರಣೆ ಆರೋಪ: ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ವಿಪಕ್ಷ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ರಾಜ್ಯದ 13 ಕಲುಷಿತ ನದಿಗಳಲ್ಲಿ ನೇತ್ರಾವತಿ ಕೂಡ ಸೇರಿರುವ ವರದಿಯನ್ನು ಉಲ್ಲೇಖಿಸಿ, ಕೊಳಚೆ ನೀರು ನದಿಗೆ ಹೋಗುತ್ತಿದೆ. ನಗರದಲ್ಲಿ ಶೇ.40ರಿಂದ ಶೇ.50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ನೀರನ್ನು ಕೊಡುತ್ತಿಲ್ವಾ ಎಂದು ಪ್ರಶ್ನಿಸಿದರು.

ಹಿರಿಯ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿ, ಶುದ್ಧೀಕರಿಸಿದ ನೀರನ್ನು ಶೇ.50ರಷ್ಟು ಪ್ರದೇಶಗಳಿಗೆ ಮಾತ್ರ ನೀಡಲಾಗುತ್ತಿದೆ. ಉಳಿದ ಪ್ರದೇಶಗಳಿಗೆ ಯಾವುದೇ ಶುದ್ಧೀಕರಣ ಮಾಡದೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು. ಸಂಸ್ಕರಣಾ ಘಟಕ ಇಲ್ಲದೆ ಕಚ್ಚಾ ನೀರನ್ನೇ ಕೊಡುವಂತಾಗಿದೆ ಎಂದು ವಿಪಕ್ಷ ನಾಯಕ ಅನಿಲ್‌ ಕುಮಾರ್‌ ಹೇಳಿದರು.

ಈ ವೇಳೆ ಆಡಳಿತ- ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ ವಿಪಕ್ಷ ಸದಸ್ಯರು, ‘ಕಲುಷಿತ ನೀರು ಬೇಡ ಬೇಡ, ಅನ್ಯಾಯ ಅನ್ಯಾಯ’ ಎಂದು ಘೋಷಣೆ ಕೂಗಿದರು. ತನಿಖೆ ನಡೆಸುವಂತೆ ಒತ್ತಾಯಿಸಿದರು.

ಆಡಳಿತ ಸದಸ್ಯ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ತುಂಬೆಯಿಂದ ಎತ್ತುವ 80 ಎಂಎಲ್‌ಡಿ ನೀರನ್ನು ಶುದ್ಧೀಕರಿಸಿ ನಗರ ಪ್ರದೇಶಗಳಿಗೆ ವಿತರಿಸಲಾಗುತ್ತಿದೆ. ಉಳಿದ 80 ಎಂಎಲ್‌ಡಿ ನೀರನ್ನು ಬೆಂದೂರುವೆಲ್‌ನಲ್ಲಿ ಶುದ್ಧೀಕರಿಸಿ ಪಣಂಬೂರು ಸುರತ್ಕಲ್‌ ಭಾಗಕ್ಕೆ ನೀಡಲಾಗುತ್ತಿದೆ. ಕಚ್ಚಾ ನೀರನ್ನು ಎಲ್ಲೂ ಕೊಡುತ್ತಿಲ್ಲ. ರಾಜಕೀಯ ಕಾರಣಕ್ಕೆ ಸುಳ್ಳು ಮಾಹಿತಿ ನೀಡಬೇಡಿ ಎಂದರು. ಕ್ಲೋರಿನೇಟೆಡ್‌ ನೀರನ್ನೇ ನೀಡಲಾಗುತ್ತಿದೆ. ಹಾಗಾಗಿ ತನಿಖೆಯ ಅಗತ್ಯವಿಲ್ಲ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು. ಶುದ್ಧೀಕೃತ ನೀರನ್ನೇ ಕೊಡುವುದಾದರೆ ತನಿಖೆಗೆ ಭಯ ಏಕೆ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು.

ಒಳಚರಂಡಿ ನೀರಿನಿಂದ ನದಿ ಕಲುಷಿತ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಲ್ಕು ಎಸ್‌ಟಿಪಿ (ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌)ಗಳ ನಿರ್ವಹಣೆಗೆ ವಾರ್ಷಿಕ 1.50 ಕೋಟಿ ರು.ಗಳನ್ನು ಪಾಲಿಕೆ ನೀಡುತ್ತಿದೆ. ಆದರೆ ಪಚ್ಚನಾಡಿಯಲ್ಲಿ ಕೊಳಚೆ ನೀರು ಮಂಜಲಪಾದೆ ಮೂಲಕ ಮರವೂರು ಬಹುಗ್ರಾಮ ಕುಡಿಯುವ ನೀರಿನ ಅಣೆಕಟ್ಟು ಸೇರುತ್ತಿದೆ. ಸುರತ್ಕಲ್‌ನಲ್ಲಿ ಕೊಳಚೆ ನೀರು ಖಂಡಿಗೆ ನದಿ ಸೇರುತ್ತಿದೆ. ಕಾವೂರು ಕೆರೆ, ಗುಜ್ಜರಕೆರೆಗಳನ್ನು ಕೋಟಿಗಟ್ಟಲೆ ಖರ್ಚು ಮಾಡಿ ಅಭಿವೃದ್ಧಿ ಮಾಡಿದ್ದರೂ ಕೊಳಚೆ ನೀರು ಸೇರುವುದು ನಿಂತಿಲ್ಲ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂದು ಆಗ್ರಹಿಸಿದರು.

ಪಚ್ಚನಾಡಿ ಎಸ್‌ಟಿಪಿ ನಿರ್ವಹಣೆಯ ಗುತ್ತಿಗೆದಾರರ ಟೆಂಡರ್ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಡಳಿತ ಸದಸ್ಯೆ ಸಂಗೀತಾ ನಾಯಕ್‌ ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಮಾತನಾಡಿ, ತ್ಯಾಜ್ಯ ನೀರು ರಾಜಕಾಲುವೆಗಳಲ್ಲಿ ಹರಿಯುತ್ತಾ ನದಿಗಳನ್ನು ಸೇರುತ್ತಿದೆ. ಈ ಬಗ್ಗೆ ದೊಡ್ಡ ಸುಧಾರಣೆಯ ಅಗತ್ಯವಿದೆ. ಆದ್ದರಿಂದ ಆಡಳಿತ- ವಿಪಕ್ಷ ಸದಸ್ಯರನ್ನು ಸೇರಿಸಿಕೊಂಡು ತನಿಖೆಗೆ ಆದೇಶ ಮಾಡಬೇಕು ಎಂದು ಸಲಹೆ ನೀಡಿದರು.

ಆಡಳಿತ- ವಿಪಕ್ಷ ಸದಸ್ಯರು ಎಸ್‌ಟಿಪಿಗಳಿಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ತನಿಖೆಯ ಅಗತ್ಯತೆ ಬಗ್ಗೆ ಗಂಭೀರ ಗಮನ ಹರಿಸುವುದಾಗಿ ಮೇಯರ್‌ ತಿಳಿಸಿದರು.

ಉಪ ಮೇಯರ್‌ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳಾ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಇದ್ದರು.