ಸಾರಾಂಶ
ಹೊಸಪೇಟೆ: ಮನುಷ್ಯ ಅತಿಯಾದ ದುರಾಸೆಯಿಂದ ಶಾಂತಿ ಕಳೆದುಕೊಳ್ಳುತ್ತಿದ್ದು, ಕೊನೆಯಿಲ್ಲದ ಯುದ್ಧದ ಚರಿತ್ರೆಗಳನ್ನು ಕಂಡಿದ್ದಾನೆ. ಆದರೆ, ಮೂಲಭೂತ ಅವಶ್ಯಕತೆಗಳಲ್ಲಿ ಶಾಂತಿಯು ಒಂದಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕವು ವಿದ್ಯಾರ್ಥಿಗಳಲ್ಲಿ ಶಾಂತಿ ಬೀಜ ಬಿತ್ತುತ್ತಿರುವುದು ಶ್ಲಾಘನೀಯ ಎಂದು ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಶ್ರೀ ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ, ಯುವ ರೆಡ್ ಕ್ರಾಸ್ ಸಹಯೋಗದೊಂದಿಗೆ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಶಾಂತಿ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಬೃಹತ್ ವಾಕ್‌ಥಾನ್ ಅನ್ನು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಅಂತರಂಗದಲ್ಲಿ ಶಾಂತಿ ಇಲ್ಲದಿದ್ದರೆ ಬದುಕನ್ನು ಅನುಭವಿಸಲು ಸಾಧ್ಯವಿಲ್ಲ. ತಪ್ಪು ಮಾಡುವ ವ್ಯಕ್ತಿಗೆ ಜ್ಞಾನದ ಕೊರತೆ, ಜ್ಞಾನ ಇದ್ದವರಿಗೆ ಅಮೃತತ್ವ ಸಿಗುವುದು, ಶಾಂತಿ ಎಂಬುದು ಭಾಷಣದಲ್ಲಿ ಹೇಳುವ ಪದವಲ್ಲ ಅದನ್ನು ಅನುಭವಿಸಿ ಆಸ್ವಾದಿಸಿದರೆ ಬದುಕು ಸಾರ್ಥಕ ಎಂದರು.
ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ, ಕೊಪ್ಪಳ ಜಿಲ್ಲೆಯ ರೆಡ್ ಕ್ರಾಸ್ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಶ್ರೀನಿವಾಸ ಹ್ಯಾಟಿ ಅವರುಗಳು ವಾಕ್‌ಥಾನ್ ಹಾಗೂ ರೆಡ್ ಕ್ರಾಸ್ ಘಟಕದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಥಿಯೋಸಾಫಿಕಲ್ ಮಹಿಳಾ ಕಾಲೇಜು ಟಿಎಮ್ಎಇ ಪಾಲಿಟೆಕ್ನಿಕ್, ನ್ಯಾಷನಲ್ ಬಿ ಎಡ್ ಕಾಲೇಜ್, ಭವರ್ ಲಾಲ್ ಬಿಎಡ್ ಕಾಲೇಜ್, ಮಲ್ಲಿಗಿ ಪ್ಯಾರಾಮೆಡಿಕಲ್ ಕಾಲೇಜ್, ವಿಜಯನಗರ ಕಾಲೇಜ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಮಲಾಪುರದ ಹಂಪಿ ಶ್ರೀವಿರೂಪಾಕ್ಷೇಶ್ವರ ಹಾಗೂ ವಿದ್ಯಾರಣ್ಯ ಕಾಲೇಜಿನ ಸುಮಾರು 1200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿ ಶಾಂತಿ ಘೋಷಣೆಗಳನ್ನು ಮೊಳಗಿಸಿದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ವಾಕ್‌ಥಾನ್ ಅಂಬೇಡ್ಕರ್ ವೃತ್ತ, ಪುನೀತ್ ರಾಜ್‌ಕುಮಾರ ವೃತ್ತಗಳ ಮೂಲಕ ಹಾದು ಬಸ್ ನಿಲ್ದಾಣದ ಮೂಲಕ ಗಾಂಧಿ ಚೌಕ್, ದೊಡ್ಡ ಮಸೀದಿ, ತರಕಾರಿ ಮಾರುಕಟ್ಟೆ ನಂತರ ಪುನೀತ್ ರಾಜಕುಮಾರ್ ವೃತ್ತದಲ್ಲಿ ಮಾನವ ಸರಪಳಿಯನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಗಾಂಧಿ ಪ್ರತಿಮೆ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ರೇಖಾ ಪ್ರಕಾಶ್, ಜಿಲ್ಲಾ ಉಪ ಸಭಾಪತಿ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ, ಕಮಲಾ ಗುಮಾಸ್ತೆ, ಬಿಂದು, ಮಂಗಳ, ರೆಹಮಾನ್, ಕೊಟ್ರಪ್ಪ, ಪ್ರಭಾಕರ್ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ವಾಕಥಾನ್ ನಲ್ಲಿ ಭಾಗಿಯಾಗಿದ್ದರು.