ಸಾರಾಂಶ
- ಸತ್ತ ಪ್ರಾಣಿಗಳು, ವೈದ್ಯಕೀಯ ತ್ಯಾಜ್ಯ ಮನಬಂದಂತೆ ವಿಲೇ: ಅಶೋಕ ಆರೋಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪುರಸಭೆ ವತಿಯಿಂದ ತಾಲೂಕಿನ ಮಾಸಡಿ ಗ್ರಾಮದ ಸಮೀಪ ಕೆಲವು ವರ್ಷಗಳಿಂದ ನಗರದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಘಟಕದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ನಡೆಸದೇ, ಮನಸೋಇಚ್ಛೆ ಕಸ ತಂದು ಸುರಿಯುತ್ತಿದ್ದಾರೆ ಎಂದು ಆರೋಪಿಸಿ, ಬುಧವಾರ ಮಾರ್ಗಮಧ್ಯೆ ಪುರಸಭೆ ಕಸ ವಿಲೇವಾರಿ ವಾಹನಗಳ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಮಾಸಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಅಶೋಕ ಮಾತನಾಡಿ, ಪ್ರತಿ ನಿತ್ಯ ಮಾಸಡಿ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೊನ್ನಾಳಿ ಪಟ್ಟಣದ ಎಲ್ಲ ತ್ಯಾಜ್ಯ ವಸ್ತುಗಳನ್ನು ಪುರಸಭೆ ವಾಹನಗಳ ಮೂಲಕ ಸಾಗಿಸಲಾಗುತ್ತಿದೆ. ಆದರೆ ಈ ಘಟಕದಲ್ಲಿ ಹಸಿಕಸ, ಒಣಕಸ ಬೇರ್ಪಡಿಸಿ, ವಿಲೇವಾರಿ ಮಾಡುತ್ತಿಲ್ಲ. ಸತ್ತ ನಾಯಿ, ಹಂದಿ ಕೋಳಿಗಳು, ವೈದ್ಯಕೀಯ ತ್ಯಾಜ್ಯಗಳ ವಿಲೇ ಮನಬಂದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಘಟಕದಲ್ಲಿ ಬೀದಿನಾಯಿಗಳು, ಹುಚ್ಚು ನಾಯಿಗಳ ಕಾಟ ಮಿತಿಮೀರಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಕಸದ ವಾಹಗಳು ಕಸವನ್ನು ಬೀಳದಂತೆ ಸೂಕ್ತವಾಗಿ ಟಾರ್ಪಲ್ ಮುಚ್ಚಿದೆಯೇ ಸಾಗಿಸುತ್ತಿದ್ದಾರೆ. ಇದರಿಂದ ಕಸ ಅಲ್ಲಲ್ಲಿ ಬೀಳುತ್ತಿದೆ. ಇಂಥ ತ್ಯಾಜ್ಯದಲ್ಲಿ ಸಿರಂಜ್, ಸೂಜಿ, ಗಾಜು ಇತರೆ ಅಪಾಯಕಾರಿ ಸಣ್ಣ ವಸ್ತುಗಳು ಗ್ರಾಮ ಸಮೀಪದ ರಸ್ತೆಯಲ್ಲಿ ಬಿದ್ದು ಜನರಿಗೆ ಅಪಾಯವಾಗುವ ಸಂದರ್ಭಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಘಟಕದಿಂದ ಮಾಸಡಿ ತರಗನಹಳ್ಳಿ, ಸಿಂಗಟಗೆರೆ, ಘಂಟ್ಯಾಪುರ, ದೇವರ ಹೊನ್ನಾಳಿ ಗ್ರಾಮಗಳ ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಬೀದಿನಾಯಿಗಳ ಕಾಟದಿಂದ ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಗ್ರಾಮದ ಜನತೆ ಅನೇಕ ಬಾರಿ ಹೊನ್ನಾಳಿ ಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ದಾರಿಯಲ್ಲೇ ಕಸದ ವಾಹನಗಳ ತಡೆದು ಪ್ರತಿಭಟನೆ ನಡಸಲಾಗುತ್ತಿದೆ ಎಂದರು.
ಗ್ರಾಮಸ್ಥರು ಪ್ರತಿಭಟನೆ ಸುದ್ದಿ ತಿಳಿದು ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಸ್ಥಳಕ್ಕೆ ಅಗಮಿಸಿ ಚರ್ಚಿಸಿದರು. ಮುಖ್ಯಾಧಿಕಾರಿ ಕರ್ತವ್ಯದ ನಿಮಿತ್ತ ಬೆಂಗಳೂರಿನಗೆ ತೆರಳಿದ್ದಾರೆ. 20 ದಿನಗಳೊಳಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಜೊತೆಗೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ ವೈಜ್ಞಾನಿಕ ರೀತಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಆಗ ಗ್ರಾಮಸ್ಥರು 20 ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಗ್ರಾಮಸ್ಥರು ಹೊನ್ನಾಳಿ ಪುರಸಭೆಗೆ ಆಗಮಿಸಿ ಅಲ್ಲಿಯೇ ಕಸ ಸುರಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಮಾಸಡಿ ಗ್ರಾಮದ ಯುವ ಮುಖಂಡರಾದ ಅನಿಲ್, ಮುಖೇಶ್,ಆದರ್ಶ, ಸುರೇಶ್, ಪ್ರವೀಣ್, ತರಗನಹಳ್ಳಿ ರಮೇಶ್ ಸೇರಿದಂತೆ ನೂರಾರು ಯುವಕರು ಇದ್ದರು.- - -
-26ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿ ಕಸ ವಿಲೇವಾರಿ ಖಂಡಿಸಿ, ಗ್ರಾಮಸ್ಥರು ಕಸ ಸಾಗಣೆ ವಾಹನಗಳ ತಡೆದು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಆಗಮಿಸಿ ಸಮಾಲೋಚನೆ ನಡೆಸಿದರು.