ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳ ಅಳವಡಿಕೆ

| Published : May 26 2024, 01:35 AM IST

ಸಾರಾಂಶ

ಅವೈಜ್ಞಾನಿಕ ವಿದ್ಯುತ್ ಕಂಬಗಳ ಅಳವಡಿಕೆಯಿಂದ ಸ್ವಲ್ಪ ಗಾಳಿ ಬೀಸಿದರೆ ವಿದ್ಯುತ್ ತಂತಿ ಮೇಲೆ ರಸ್ತೆಬದಿಯ ಮರದ ಕೊಂಬೆ ಬಿದ್ದು ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಿಗೆ ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿಯೇ ಕಾಲ ಕಳೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅವೈಜ್ಞಾನಿಕ ವಿದ್ಯುತ್ ಕಂಬಗಳ ಅಳವಡಿಕೆಯಿಂದ ಸ್ವಲ್ಪ ಗಾಳಿ ಬೀಸಿದರೆ ವಿದ್ಯುತ್ ತಂತಿ ಮೇಲೆ ರಸ್ತೆಬದಿಯ ಮರದ ಕೊಂಬೆ ಬಿದ್ದು ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಿಗೆ ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿಯೇ ಕಾಲ ಕಳೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಬಸರಾಳು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಮಂಡ್ಯ - ನಾಗಮಂಗಲ ಮುಖ್ಯ ರಸ್ತೆ ಬದಿಯ ಸಾಲು ಮರಗಳ ಮಧ್ಯೆ ವಿದ್ಯುತ್ ಕಂಬಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದೇ ಈ ವಿದ್ಯುತ್ ಅಡಚಣೆಗೆ ಕಾರಣವಾಗಿದೆ.ತಾಲೂಕಿನ ಗಡಿ ಲಿಂಗಮ್ಮನಹಳ್ಳಿ ಗ್ರಾಮದಿಂದ ಕರಡಹಳ್ಳಿ ಗೇಟ್ ವರೆಗಿನ ನಾಲ್ಕೈದು ಕಿ.ಮೀ.ವರೆಗೂ ರಸ್ತೆಬದಿ ಇರುವ ನೀಲಗಿರಿ ಮತ್ತು ಅಕೇಶಿಯಾ ಮರಗಳ ನಡುವೆ ವಿದ್ಯುತ್ ಕಂಬಗಳನ್ನು ಅಳವಡಿಸಿ 11 ಕೆ.ವಿ. ಮಾರ್ಗದ ಮೂಲಕ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಇದೇ ಮಾರ್ಗದಲ್ಲಿ ಸಿಗುವ ಹತ್ತಾರು ಹಳ್ಳಿಗಳಿಗೆ ನಿರಂತರ ವಿದ್ಯುತ್ ಪೂರೈಸಲು ಅರಣ್ಯ ಪ್ರದೇಶದ ಮಧ್ಯದಲ್ಲಿಯೇ 11 ಕೆವಿ ವಿದ್ಯುತ್ ತಂತಿ ಎಳೆಯಲಾಗಿದೆ.ಸಂಜೆ ವೇಳೆಯಲ್ಲಿ ಸ್ವಲ್ಪ ಗಾಳಿ ಬೀಸಿತೆಂದರೆ ಈ ಮಾರ್ಗದಲ್ಲಿರುವ 11 ಕೆವಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಅಥವಾ ಕಡ್ಡಿಗಳು ಬಿದ್ದರೆ ಲಿಂಗಮ್ಮನಹಳ್ಳಿ, ಬಿಂಡೇನಹಳ್ಳಿ, ಮಾಟನಕೊಪ್ಪಲು, ಹೆಣ್ಣಿಚನ್ನನಕೊಪ್ಪಲು, ಗಂಡುನಿಂಗಿಕೊಪ್ಪಲು, ಹುಳ್ಳೇನಹಳ್ಳಿ, ಗಂಗಾಕಾಲೋನಿ, ಕರಡಹಳ್ಳಿ, ಕಲ್ಲಿನಾಥಪುರ, ಬೋರಿಕೊಪ್ಪಲು, ಚಿಕ್ಕಯಗಟಿ, ದೊಡ್ಡಯಗಟಿ, ಯಗಟಿಕೊಪ್ಪಲು, ಮುದ್ದಲಿಂಗನಕೊಪ್ಪಲು ಹಾಗೂ ಗುರುಗಳಮಾದಹಳ್ಳಿ ಗ್ರಾಮಗಳಿಗೆ ತಕ್ಷಣ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ವಿದ್ಯುತ್ ಕಡಿತಗೊಳ್ಳುತ್ತಿದ್ದಂತೆ ಬಸರಾಳು ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಲೈನ್ ಟ್ರಬಲ್ ಆಗಿದೆ ಎಂದು ವಾಟ್ಸ್‌ ಆಪ್ ಗ್ರೂಪ್‌ಗೆ ಸಂದೇಶ ಕಳುಹಿಸಿ ಕೈಚೆಲ್ಲುತ್ತಾರೆ. ಮರುದಿನ ಬೆಳಗ್ಗೆ ಸೆಸ್ಕಾಂ ನೌಕರರು ಬಂದು ಸಮಸ್ಯೆ ಸರಿಪಡಿಸುವವರೆಗೂ 15 ಕ್ಕೂ ಹೆಚ್ಚು ಗ್ರಾಮಗಳ ಜನರು ಇಡೀ ರಾತ್ರಿ ಕಗ್ಗತ್ತಲಿನಲ್ಲಿಯೇ ಕಾಲಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತಿದೆ.ಈ ಅವ್ಯವಸ್ಥೆಯನ್ನು ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸುಡುವ ನೀರಿಗೆ ತಣ್ಣೀರು ಬೆರೆಸಿದಂತೆ ವಿದ್ಯುತ್ ತಂತಿ ಮೇಲೆ ಬಿದ್ದಿರುವ ಮರದ ಕೊಂಬೆ ಅಥವಾ ಕಡ್ಡಿಯನ್ನು ತೆರವುಗೊಳಿಸಿ ವಿದ್ಯುತ್ ನೀಡುತ್ತಾರೆ.

ಆದರೆ ಪದೇ ಪದೇ ಉಂಟಾಗುವ ಈ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸೆಸ್ಕಾಂ ಅಧಿಕಾರಿಗಳು ಕ್ರಮವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.