ಮಂಡ್ಯ ಜಿಲ್ಲೆಯಲ್ಲಿ ನಿಲ್ಲದ ಡೆಂಘೀ; ಜನರಲ್ಲಿ ಹೆಚ್ಚಿದ ಆತಂಕ

| Published : Aug 26 2024, 01:31 AM IST

ಸಾರಾಂಶ

ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ 3796 ಜನರನ್ನು ಡೆಂಘೀ ತಪಾಸಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ 815 ಮಂದಿಗೆ ಡೆಂಘೀ ಇರುವುದು ದೃಢಪಟ್ಟಿತ್ತು. ಮಂಡ್ಯ ನಗರ ಮತ್ತು ಗ್ರಾಮಾಂತರದಲ್ಲಿ ತಪಾಸಣೆಗೊಳಪಟ್ಟ 1642 ಮಂದಿಯಲ್ಲಿ 455 ಜನರಲ್ಲಿ ಡೆಂಘೀ ಜ್ವರ ದೃಢಪಟ್ಟಿರುವುದು ವರದಿಯಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಡೆಂಘೀ ಪ್ರಕರಣಗಳು ವರದಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಹಾಟ್‌ಸ್ಪಾಟ್‌ಗಳನ್ನು ಗುರುತಿಸುವುದು, ಲಾರ್ವಾ ಸಮೀಕ್ಷೆ, ಬೇವಿನ ಎಣ್ಣೆ ವಿತರಣೆ, ಫಾಗಿಂಗ್ ಸಿಂಪರಣೆ, ಜ್ವರ ತಪಾಸಣಾ ಕೇಂದ್ರ ತೆರೆಯುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಅಲ್ಲಲ್ಲಿ ಡೆಂಘೀ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ 3796 ಜನರನ್ನು ಡೆಂಘೀ ತಪಾಸಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ 815 ಮಂದಿಗೆ ಡೆಂಘೀ ಇರುವುದು ದೃಢಪಟ್ಟಿತ್ತು. ಮಂಡ್ಯ ನಗರ ಮತ್ತು ಗ್ರಾಮಾಂತರದಲ್ಲಿ ತಪಾಸಣೆಗೊಳಪಟ್ಟ 1642 ಮಂದಿಯಲ್ಲಿ 455 ಜನರಲ್ಲಿ ಡೆಂಘೀ ಜ್ವರ ದೃಢಪಟ್ಟಿರುವುದು ವರದಿಯಾಗಿತ್ತು.

5 ಹಾಟ್‌ಸ್ಪಾಟ್‌ಗಳು ಗುರುತು:

ಡೆಂಘೀ ಜ್ವರ ಹೆಚ್ಚು ಕಂಡುಬರುತ್ತಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪ್ರತಿ 100 ಮೀಟರ್ ಪ್ರದೇಶದ ಅಂತರದಲ್ಲಿ 2ಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ ಅದನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಆ ಪ್ರದೇಶದಲ್ಲಿ 14 ದಿನಗಳ ಕಾಲ ನಿರಂತರವಾಗಿ ಪರಿಶೀಲನೆ ನಡೆಸಲಾಗುವುದು.

ಪ್ರಸ್ತುತ ಚಾಮುಂಡೇಶ್ವರಿನಗರ 12ನೇ ಕ್ರಾಸ್, ವಿವಿ ನಗರ, ಸೋಮನಹಳ್ಳಿ, ಬಿ.ಹೊಸೂರು ಸೇರಿದಂತೆ ಐದು ಸ್ಥಳಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಈ ಮೊದಲು 29 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಇಂತಹ ಹಾಟ್‌ಸ್ಪಾಟ್‌ಗಳಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ, ಬೇವಿನ ಎಣ್ಣೆ ವಿತರಣೆ, ಯಾರಿಗಾದರೂ ಜ್ವರ ಬಂದಿದ್ದರೆ ಜ್ವರ ತಪಾಸಣಾ ಕೇಂದ್ರ ತೆರೆದು 14 ಗಂಟೆಯೂ ವೈದ್ಯರನ್ನು ನಿಯೋಜಿಸಿ ನಿರಂತರವಾಗಿ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಆಶಾ ಕಾರ್‍ಯಕರ್ತರು. ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯರು. ಆರೋಗ್ಯ ಕಾರ್‍ಯಕರ್ತೆಯರು, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಜೊತೆಗೂಡಿಸಿಕೊಂಡು ಮನೆ ಮನೆಗೆ ತೆರಳಿ ತಪಾಸಣೆ ನಡೆಸುವುದು. ಲಾರ್ವಾ, ಕ್ಯೂಪಾಗಳಿರುವುದು ಕಂಡುಬಂದರೆ ಅಲ್ಲೇ ಅವುಗಳನ್ನು ನಾಶಪಡಿಸುವುದು. ಗ್ರಾಮೀಣ ಜನರಿಗೆ ಮನವರಿಕೆ ಮಾಡಿಕೊಟ್ಟು ರೆಫ್ರಿಜರೇಟರ್ ಹಿಂಭಾಗ, ತೊಟ್ಟಿಗಳು ಸೇರಿದಂತೆ ಸುತ್ತಮುತ್ತಲ ಜಾಗದಲ್ಲಿ ನಿಲ್ಲುವ ನೀರನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತಿದೆ ಎಂದು ಡೆಂಘೀ ನಿರ್ಮೂಲನಾ ಅಧಿಕಾರಿ ಡಾ.ಕಾಂತರಾಜು ಮಾಹಿತಿ ನೀಡಿದರು.

ಕೊಳಚೆ ಪ್ರದೇಶಗಳಲ್ಲಿ ಸರ್ವೇ:

ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ನೆರವಿನೊಂದಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯ ನಿರೀಕ್ಷಕೊಂದಿಗೆ ಕೊಳಚೆ ಪ್ರದೇಶಗಳಲ್ಲಿ ಸರ್ವೇ ನಡೆಸಲಾಗುತ್ತಿದೆ. ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಈ ಹಿಂದೆ ಮಂಗಳವಾರ ಸರ್ವೆಕಾರ್‍ಯ ಮಾಡಲಾಗುತ್ತಿತ್ತು. ಡೆಂಘೀ ಹೆಚ್ಚಾದ ನಂತರ ಮಂಗಳವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಪರಿಶೀಲನೆ ನಡೆಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆಯನ್ನು ಕಡ್ಡಾಯವಾಗಿ ನಡೆಸುವುದು. ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ೫ ದಿನಗಳೊಳಗಿನ ಜ್ವರ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ರಕ್ತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ದಿನಗಳಾದಲ್ಲಿ ಡಿಎಚ್‌ಒ ಕಚೇರಿಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಲಾಗುತ್ತಿದೆ.ಜಿಲ್ಲೆಯಲ್ಲಿ ವರದಿಯಾದ ಡೆಂಘೀ ಪ್ರಕರಣಗಳು

ತಾಲೂಕುರಕ್ತದ ಮಾದರಿಒಟ್ಟು

ಮಂಡ್ಯ (ನಗರ)606151

ಮಂಡ್ಯ (ಗ್ರಾಮಾಂತರ)1041304

ಮದ್ದೂರು624139

ಮಳವಳ್ಳಿ48146

ಪಾಂಡವಪುರ28941

ಶ್ರೀರಂಗಪಟ್ಟಣ45267

ಕೆ.ಆರ್.ಪೇಟೆ15529

ನಾಗಮಂಗಲ14738

ಒಟ್ಟು3796815ಮೊದಲಿಗಿಂತಲೂ ಈಗ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳನ್ನು ನಿಯಂತ್ರಣದಲ್ಲಿ ಇಡಲಾಗಿದೆ. ಪ್ರಸ್ತುತ 19 ಸಕ್ರಿಯ ಪ್ರಕರಣಗಳು ಮಾತ್ರ ಇವೆ. 5 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸಿದರೆ ಶೂನ್ಯಕ್ಕೆ ತರಲಾಗುತ್ತದೆ.

- ಡಾ.ಕೆ. ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ