ಸಾರಾಂಶ
ಮೂಡುಬಿದಿರೆ: ಸೀಸನ್‌ನಲ್ಲಿ ಹಲಸಿಗೆ ಬೆಲೆ ಕಡಿಮೆ. ಅಕಾಲದಲ್ಲಿ ಹಲಸು ಬೆಳೆದರೆ ಉತ್ತಮ ಬೇಡಿಕೆ ಸಾಧ್ಯ. ಅದಕ್ಕೆಂದೇ ಕರಾವಳಿಯ ವಾತಾವರಣಕ್ಕೆ ಸೂಕ್ತವಾದ, ಅಕಾಲದಲ್ಲಿ ಫಸಲು ನೀಡುವ ''''ಮಂಗಳ ಅರ್ಲಿ’ ತಳಿಯ ಹಲಸು ಅಭಿವೃದ್ಧಿ ಪಡಿಸಲಾಗಿದ್ದು, ಈ ವರ್ಷ ಫಸಲು ನೀಡಿದೆ.
ನಿವೃತ್ತ ಅರಣ್ಯಾಧಿಕಾರಿ, ಹಲಸು ಬೆಳೆಗಾರ ಗೇಬ್ರಿಯಲ್ ವೇಗಸ್ ಅವರ ಮೂಡುಬಿದಿರೆ ಸಮೀಪದ ನೀರ್ಕರೆಯ ಹಲಸು ಫಾರ್ಮ್‌ನಲ್ಲಿ ಮಂಗಳ ಅರ್ಲಿ ಫಸಲು ನೀಡಿದ್ದು, ಹಲಸಿನ ಸೀಸನ್ ಮುಗಿದರೂ ಹಲಸು ಬೆಳೆದು ನಗೆ ಚೆಲ್ಲಿದ್ದಾರೆ.2021 ರಲ್ಲಿ ಮಂಗಳೂರಿನಲ್ಲಿ ಈ ಹೊಸ ತಳಿಯನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿತ್ತು. ಗೇಬ್ರಿಯಲ್ ಅವರು 2021 ರ ಆಗಸ್ಟ್‌ನಲ್ಲಿ ಮಂಗಳ ಅರ್ಲಿ ತಳಿಯ 60 ಗಿಡ ನೆಟ್ಟಿದ್ದು, ಮೂರು ವರ್ಷದಲ್ಲಿ ಕೆಲವು ಗಿಡಗಳಲ್ಲಿ ಫಸಲು ನೀಡಿದೆ. ಕಸಿ ತಜ್ಞರಾದ ಉಡುಪಿಯ ಗುರುರಾಜ ಬಾಳ್ತಿಲ್ಲಾಯ ಹಾಗೂ ಮಂಗಳೂರಿನ ಸರ್ವೇಶ್ವರ ರಾವ್ ಅವರು ಈ ತಳಿಯ ಕಸಿ ಗಿಡಗಳನ್ನು ತಯಾರಿಸಿದ್ದರು.
ಹಲವು ಹಲಸು: ಗೇಬ್ರಿಯಲ್ ಅವರ ಫಾರ್ಮ್‌ನಲ್ಲಿ ಪ್ರಕಾಶ್ಚಂದ್ರ, ಮನಮೋಹನ್, ಪ್ರಶಾಂತಿ, ಅನನ್ಯ, ಮಂಗಳ ಅರ್ಲಿ, ವಿ ಸಿಂಗಾಪುರ್ ಸೇರಿದಂತೆ 60 ಕ್ಕೂ ಅಧಿಕ ತಳಿಯ ಸಾವಿರಾರು ಹಲಸಿನ ಮರಗಳಿವೆ. ವಾಣಿಜ್ಯಿಕವಾಗಿ ಹಲಸು ಬೆಳೆಯುವಲ್ಲಿ ಯಶಸ್ಸು ಗಳಿಸಿದ ಗೇಬ್ರಿಯಲ್ ಅವರ ಫಾರ್ಮ್‌ಗೇ ಗ್ರಾಹಕರು ಬಂದು ಹಲಸು ಖರೀದಿಸುವುದು ವಿಶೇಷ.ನಮ್ಮ ಕರಾವಳಿಯಲ್ಲಿ ಈ ಸಮಯದಲ್ಲಿ ಹಲಸಿನ ಹಣ್ಣು ಸಿಗುವುದಿಲ್ಲ. ಅದಕ್ಕೆಂದೇ ಅಕಾಲ ಹಲಸಿನ ಮಂಗಳ ಅರ್ಲಿ ಗಿಡ ಸಿದ್ಧಪಡಿಸಿದ್ದಾರೆ. ಎರಡು ವರ್ಷ ಆಗುವಾಗಲೇ ಮಿಡಿ ಬಂತು, ಆದರೆ ಗಿಡಗಳ ಬೆಳವಣಿಗೆ ಆಗುವುದಿಲ್ಲ ಎಂದು ಅವುಗಳನ್ನು ಕಟ್ ಮಾಡಿದೆ. ಟ್ರಯಲ್ ನೋಡುವ ಸಲುವಾಗಿ ಎರಡು ಗಿಡದಲ್ಲಿ ಕಾಯಿ ಹಾಗೇ ಬಿಟ್ಟೆ, ಕಾಯಿ ಉತ್ತಮವಾಗಿ ಬೆಳೆದಿದೆ, ಸೆಪ್ಟೆಂಬರ್ ಕೊನೆಯಲ್ಲಿ ಹಣ್ಣು ಕೊಯ್ಲಿಗೆ ಸಿಗಲಿದೆ.
- ಗೇಬ್ರಿಯಲ್ ವೇಗಸ್, ಹಲಸು ಬೆಳೆಗಾರರು