ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದರೆ ಸಂವಿಧಾನದತ್ತ ಹಕ್ಕು ಮತ್ತು ಜವಾಬ್ದಾರಿಯನ್ನು ನಿಭಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಬೊಮ್ಮನಕಟ್ಟೆಯಲ್ಲಿ ರಾಷ್ಟ್ರಭಕ್ತರ ಬಳಗವು ಗೋವರ್ಧನ್ ಟ್ರಸ್ಟ್‌ ಸಹಯೋಗದಲ್ಲಿ ಓಂಶಕ್ತಿ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರನೇ ಮತದಾರರ ಸಹಾಯ ಕೇಂದ್ರ ವಿಶೇಷ ಪರಿಷ್ಕರಣಾ ಉದ್ಘಾಟನಾ ಸಮಾರಂಭ-ಎಸ್‌ಐಆರ್ ಎನ್ಯೂಮರೇಷನ್ ಫಾರಂ ತುಂಬುವ ವಿಧಾನದ ಬಗ್ಗೆ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶದ ಪ್ರಜೆಯಾಗಿ ಇಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿದೆ. ಅರ್ಹ ಎಲ್ಲರಿಗೂ ಮತದಾನದ ಹಕ್ಕಿದೆ. ಅದರಿಂದ ಯಾರೂ ವಂಚಿತರಾಗಬಾರದು. ಹಕ್ಕುಗಳನ್ನು ಪಡೆಯಲು ಜವಾಬ್ದಾರಿ ನಿಭಾಯಿಸುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಲೆಕ್ಕಕ್ಕೂ ಇಲ್ಲ, ಬುಕ್ಕಲ್ಲೂ ಇಲ್ಲ ಎನ್ನುವಂತ್ತಾಗುತ್ತದೆ. ಇವೆರಡಕ್ಕೂ ಇರಬೇಕು ಎಂದಾದರೆ ಹಕ್ಕು ಮತ್ತು ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಪ್ರಜಾಪ್ರಭುತ್ವದ ಕಲ್ಪನೆಯೇ ಬಹಳಷ್ಟು ಜನರಿಗೆ ಇನ್ನೂ ಗೊತ್ತಾಗಿಲ್ಲ. ನ್ಯೂನ್ಯತೆಗಳು ಎಲ್ಲಾ ಕಡೆಯೂ ಇರುತ್ತವೆ. ಅವುಗಳನ್ನು ಹೋಗಲಾಡಿಸಿ ಜಾಗೃತರಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದ ಅವರು, ಪ್ರಪಂಚದ ವಿದ್ಯಮಾನಗಳಿಗೆ ಯಾರೂ ಸ್ಪಂದಿಸುವುದಿಲ್ಲವೋ ಅವರು ಎಂದಿಗೂ ಯಶಸ್ವಿಯಾಗಲಾರರು ಎಂದರು.


ಎಸ್‌ಐಆರ್ ಬಗ್ಗೆ ಕೆಲವರು ಸುಖಾಸುಮ್ಮನೆ ಗೊಂದಲ ಎಬ್ಬಿಸುತ್ತಿದ್ದಾರೆ. ಇದರಲ್ಲಿ ಯಾವ ಗೊಂದಲವೂ ಇಲ್ಲ. ಪ್ರತಿಯೊಬ್ಬ ಅರ್ಹ ಮತದಾರ ತನ್ನ ಹೆಸರನ್ನು ಮತಪಟ್ಟಿಯಲ್ಲಿ ದೃಢಪಡಿಸಿಕೊಳ್ಳಲು ಇದೊಂದು ಸದಾವಕಾಶ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಭಾರತೀಯನೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಎಸ್‌ಐಆರ್‌ನಲ್ಲಿ ಪಾಲ್ಗೊಳ್ಳದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತೇವೆ. ಬೊಮ್ಮನಕಟ್ಟೆಯ ಓಂಶಕ್ತಿ ಗೆಳೆಯರ ಬಳಗ ಈ ನಿಟ್ಟಿನಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಸ್‌ಐಆರ್ ಮಾಹಿತಿ ಕೇಂದ್ರವನ್ನು ತೆರೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಮ್ಮ ಬಳಗದ ಮೂರನೇ ಮಾಹಿತಿ ಕೇಂದ್ರ ಆರಂಭಿಸುತ್ತಿದ್ದೇವೆ. ಆ.೮ರವರೆಗೆ ಈ ಕೇಂದ್ರ ತೆರೆದಿರುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸಿ ಇನ್ನಷ್ಟು ಗಟ್ಟಿಗೊಳಿಸಲು ಸಾರ್ವಜನಿಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಯುವ ಮುಖಂಡ ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ರಾಷ್ಟ್ರಭಕ್ತರ ಬಳಗದಿಂದ ಬೊಮ್ಮನಕಟ್ಟೆಯಲ್ಲಿ ಮೂರನೇಯ ಎಸ್‌ಐಆರ್ ಮಾಹಿತಿ ಕೇಂದ್ರ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಸುಮಾರು ೩೫-೪೦ಸಾವಿರ ಮತದಾರರಿದ್ದಾರೆ. ಬಿಎಲ್‌ಓಗಳಿಗೊಬ್ಬರಿಗೇ ಎಸ್‌ಐಆರ್ ಪ್ರಕ್ರಿಯೆ ಮುಗಿಸಲು ಕಷ್ಟಸಾಧ್ಯವಾಗುತ್ತಿದೆ. ಅವರ ಕೆಲಸಕ್ಕೆ ಸಹಕಾರಿಯಾಗಲು ಬಿಎಲ್‌ಓಗಳಿಗೆ ಸಹಾಯಕರನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ.ವಿಶ್ವಾಸ್, ಮೋಹನ್ ಜಾದವ್, ಡಾ.ರೇಣುಕಾರಾಧ್ಯ, ಹನುಮಂತಪ್ಪ, ಮಂಜು, ಶಿವಾಜಿ, ರಾಜು, ಅನಿತಾ ಮುಂಜುನಾಥ್, ಗೌರಮ್ಮ, ಕೆಂಪಮ್ಮ, ಮಂಜುಳಾ ಪಾಂಡೆ, ವಿನುತ ಮತ್ತಿತರರು ಇದ್ದರು.

- - -

-20ಎಸ್‌ಎಂಜಿಕೆಪಿ04:

ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ರಾಷ್ಟ್ರಭಕ್ತರ ಬಳಗವು ಗೋವರ್ಧನ್ ಟ್ರಸ್ಟ್‌ನ ಸಹಯೋಗದಲ್ಲಿ ಓಂಶಕ್ತಿ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರನೇ ಮತದಾರರ ಸಹಾಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ನೆರವೇರಿಸಿದರು.