ದೈವ ದೇವರುಗಳ ಆಶೀರ್ವಾದದಿಂದ ಉನ್ನತಿ: ಪದ್ಮರಾಜ್

| Published : Apr 18 2024, 02:16 AM IST

ಸಾರಾಂಶ

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಅಳದಂಗಡಿ ಶ್ರೀ ಸತ್ಯದೇವತೆ ಸಾನಿಧ್ಯ, ನಾರಾವಿ ದಿಗಂಬರ ಜಿನ ಚೈತ್ಯಾಲಯ ಧರ್ಮನಾಥ ಸ್ವಾಮಿ ಬಸದಿ, ನಾರಾವಿ ಸಂತ ಅಂಥೋನಿ ಚರ್ಚ್‌ಗೆ ಪದ್ಮರಾಜ್‌ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಾನು ರಾಜಕೀಯಕ್ಕೆ ಬರುತ್ತೇನೆ, ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆದುಕೊಳ್ಳುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ತುಳುನಾಡಿನ ದೈವ- ದೇವರುಗಳ ಆಶೀರ್ವಾದದಿಂದ ಎಲ್ಲವೂ ಸಾಧ್ಯವಾಗಿದೆ. ಯಾವುದೇ ದ್ವೇಷ ಭಾವನೆ ಹರಡದೆ, ತುಳುನಾಡಿನ ಅಭಿವೃದ್ಧಿ ಪರ್ವ ನಡೆಯಬೇಕಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಹೇಳಿದ್ದಾರೆ.

ನಾರಾವಿಯಿಂದ ಅಳದಂಗಡಿವರೆಗೆ ಬೃಹತ್‌ ರೋಡ್ ಶೋ ನಡೆಸಿದ ಬಳಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ತಾವು ಮಾತ್ರ ದೇಶ ಪ್ರೇಮಿಗಳು, ಎದುರಿನವರು ದೇಶದ್ರೋಹಿಗಳು ಎಂದು ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ದೇಶಪ್ರೇಮಿಗಳು ಮನೆ ಮನೆಯ ಸ್ಥಿತಿಯನ್ನು ಗಟ್ಟಿಗೊಳಿಸಬೇಕಿತ್ತು. ಆದರೆ ಬಿಜೆಪಿಗರು ಅನೇಕರ ಮನೆಗಳನ್ನು ಅನಾಥ ಮಾಡಿದ್ದಾರೆ. ಉದ್ಯೋಗ ಸೃಷ್ಟಿಸಿ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕಿತ್ತು. ಆದರೆ ಕರಾವಳಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ. ಕನಿಷ್ಠ ಪಕ್ಷ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ತಂದಿರುವ ಯೋಜನೆಗಳನ್ನು ಮೇಲ್ದರ್ಜೆಗೂ ಏರಿಸಿಲ್ಲ. ಇದಾವುದನ್ನೂ ಮಾಡದೆ ಮನೆ- ಮನಗಳನ್ನು ಒಡೆದದ್ದು, ಮನೆಗಳನ್ನು ಅನಾಥವಾಗಿಸಿದ್ದೇ ಬಿಜೆಪಿಗರ ಸಾಧನೆ ಎಂದು ಪದ್ಮರಾಜ್‌ ಹೇಳಿದರು.

ಹಿಂದುತ್ವದ ಬಗ್ಗೆ ಮಾತನಾಡುವವರು ನಾವು ಮಾಡಿರುವಷ್ಟು ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ. ಇದೀಗ ದೈವಗಳಿಗೇ ನ್ಯಾಯ ಕೊಡಿಸುವ ಮಾತನ್ನು ಆಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಬಿಜೆಪಿಗರು ಅಪಪ್ರಚಾರ ಶುರು ಮಾಡಿದ್ದಾರೆ. ಇದಕ್ಕೆ ಎದೆಗುಂದದಿರಿ. ಯಾವುದೇ ಕಾರಣಕ್ಕೂ ನಾವು ದ್ವೇಷದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಪದ್ಮರಾಜ್‌ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅಲೆ ಇದೆ. ಜನಾರ್ದನ ಪೂಜಾರಿ ಅವರ ಶಿಷ್ಯ ಪದ್ಮರಾಜ್ ಪಾರ್ಲಿಮೆಂಟ್‌ ಮೆಟ್ಟಿಲೇರಿದರೆ ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಹೇಳಿದರು.

ಮಾಜಿ ಸಚಿವರಾದ ರಮಾನಾಥ ರೈ, ಗಂಗಾಧರ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಪ್ರಮುಖರಾದ ರಂಜನ್ ಗೌಡ, ನಾಗೇಶ್ ಗೌಡ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಇದ್ದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿದರು. ಶೇಖರ್ ಕುಕ್ಕೆಟ್ಟಿ ವಂದಿಸಿದರು.

ಧಾರ್ಮಿಕ ಕೇಂದ್ರಗಳಿಗೆ ಭೇಟಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಅಳದಂಗಡಿ ಶ್ರೀ ಸತ್ಯದೇವತೆ ಸಾನಿಧ್ಯ, ನಾರಾವಿ ದಿಗಂಬರ ಜಿನ ಚೈತ್ಯಾಲಯ ಧರ್ಮನಾಥ ಸ್ವಾಮಿ ಬಸದಿ, ನಾರಾವಿ ಸಂತ ಅಂಥೋನಿ ಚರ್ಚ್‌ಗೆ ಪದ್ಮರಾಜ್‌ ಭೇಟಿ ನೀಡಿದರು.