ಮೇಲ್ಮನೆಗೆ ಆಯನೂರುರಂತಹ ಪ್ರಬಲ ನಾಯಕರು ಅವಶ್ಯ: ಸಚಿವ ಮಧು

| Published : May 12 2024, 01:20 AM IST / Updated: May 12 2024, 12:45 PM IST

ಸಾರಾಂಶ

 ಮೇಲ್ಮನೆಯಲ್ಲಿ ಅತ್ಯಂತ ಪ್ರಬಲ ನಾಯಕರ ಅವಶ್ಯಕತೆ ಇದೆ. ಆದ್ದರಿಂದ, ಆಯನೂರು ಮಂಜುನಾಥರ ಬೆಂಬಲಿಸಬೇಕಿದೆ.

 ಶಿವಮೊಗ್ಗ :  ಕ್ಷೇತ್ರದಲ್ಲಿ ಆಯನೂರು ಮಂಜುನಾಥರ ಗೆಲುವು, ಪಕ್ಷದ ಗೆಲುವು ಆದ್ದರಿಂದ, ಇರುವ ಕಾಲಾವಕಾಶದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಹೆಚ್ಚು ಕಾಳಜಿವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೆ ಲೋಕಸಭಾ ಚುನಾವಣೆ ಕಾರ್ಯದಲ್ಲಿ ಎಲ್ಲಾ ಕಾರ್ಯರ್ತರು ಶಕ್ತಿ ಮೀರಿ ಶ್ರಮಿಸಿದ್ದಾರೆ. ಗೀತಾಕ್ಕ ಅವರ ಗೆಲುವಿಗೆ ಎಲ್ಲಾ ರೀತಿಯ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಅದೇ ರೀತಿ, ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ಕೂಡ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಕರೆ ನೀಡಿದರು.

ಆಯನೂರು ಮಂಜುನಾಥರನ್ನು ಮೇಲ್ಮನೆಗೆ ಕಳುಹಿಸಿಕೊಡುವ ಕಾರ್ಯ ಖಂಡಿತಾ ಆಗಬೇಕಿದೆ. ಬಿಜೆಪಿಗರಿಗೆ ಜೆಡಿಎಸ್ ಪಕ್ಷದ ಮೈತ್ರಿಯೊಂದಿಗೆ ಕೈ ಜೋಡಿಸಿದ ಬಳಿಕ ಬುದ್ಧಿ ಸ್ಥಿಮಿತ ಕಳೆದುಕೊಂಡಿದೆ. ಆದ್ದರಿಂದ, ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾದರೂ ಕೂಡ ಅಡ್ಡಗಾಲು ಹಾಕಲು ಆರಂಭಿಸಿದ್ದಾರೆ. ಆದ್ದರಿಂದ, ಮೇಲ್ಮನೆಯಲ್ಲಿ ಅತ್ಯಂತ ಪ್ರಬಲ ನಾಯಕರ ಅವಶ್ಯಕತೆ ಇದೆ. ಆದ್ದರಿಂದ, ಆಯನೂರು ಮಂಜುನಾಥರ ಬೆಂಬಲಿಸಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿನಿಂದ ಪಕ್ಷ ಸಂಘಟನೆಗೆ ಶಕ್ತಿ ಬರಲಿದೆ. ಆದ್ದರಿಂದ, ಇಲ್ಲಿ ಆಯನೂರು ಮಂಜುನಾಥ ಹಾಗೂ ಶಿಕ್ಷಕರ ಕ್ಷೇತ್ರದ ಮಂಜುನಾಥ ಕುಮಾರ್ ಅವರಿಗೆ ಬೆಂಬಲಿಸಬೇಕು ಎಂದರು.

ಕ್ಷೇತ್ರದ ಪ್ರತಿಷ್ಠೆಯ ಪ್ರಶ್ನೆ:

ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಮಾತನಾಡಿ, ಪದವೀಧರ ಚುನಾವಣೆಯು ಕ್ಷೇತ್ರದ ಪ್ರತಿಷ್ಠೆಯ ಪ್ರಶ್ನೆ. ಈಗಾಗಲೇ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಗೆಲ್ಲುವ ಎಲ್ಲಾ ಲಕ್ಷಣ ಕಾಣುತ್ತಿದೆ. ಕ್ಷೇತ್ರದ ಜನರು ಖಂಡಿತಾ ಗೀತಾರ ಕೈ ಹಿಡಿದಿದ್ದಾರೆ. ಅದೇ ರೀತಿ, ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯೂ ಹತ್ತಿರ ಬರುತ್ತಿದೆ. ಆದ್ದರಿಂದ, ಇಲ್ಲಿ ಹೆಚ್ಚಿನ ಪದವೀಧರರು ನನಗೆ ಬೆಂಬಲಿಸಬೇಕು ಎಂದು ಕೋರಿದರು.

ಕಳೆದ ಬಾರಿ ಅತಿ ಕಡಿಮೆ ಮತಗಳಿಂದ ಸೋತೆ:

ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ ಕುಮಾರ್ ಮಾತನಾಡಿ, ಇದು ನನ್ನ ಮೂರನೇ ಚುನಾವಣೆ. ನಾನೂ ಕೂಡ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಸಂಘಟನೆಗಳ ಮೂಲಕ ಜನ ಸೇವೆ ಮಾಡಿದ್ದೇನೆ. ಆದರೆ, ಹಿಂದಿನ ಚುನಾವಣೆಯಲ್ಲಿ ವಿಪಕ್ಷಗಳ ಪಿತೂರಿಯಿಂದ ಅತಿ ಕಡಿಮೆ ಮತಗಳಿಂದ ಸೋಲು ಕಾಣಬೇಕಾಯಿತು. ಆದ್ದರಿಂದ ಈ ಚುನಾವಣೆಯಲ್ಲಿ ಮತದಾರರು ಹರಸಬೇಕು ಎಂದು ಮನವಿ ಮಾಡಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಭೋವಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಜಿ.ಡಿ.ಮಂಜುನಾಥ, ಸಿ.ಎಸ್.ಚಂದ್ರಭೂಪಾಲ್, ಧೀರರಾಜ ಹೊನ್ನವಿಲೆ, ಬಲ್ಕೀಸ್ ಬಾನು, ಅನಿತಾ ಕುಮಾರಿ, ವೈ.ಎಚ್.ನಾಗರಾಜ, ಹಿರಣ್ಣಯ್ಯ ಇದ್ದರು.

--------

ಜೂನ್‌ 3ರಂದು ಚುನಾವಣೆ

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ (ಹೊನ್ನಾಳಿ, ನ್ಯಾಮತಿ, ಚನ್ನಗಿರಿ) ಜಿಲ್ಲಾ ವ್ಯಾಪ್ತಿಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯು ಜೂ.3ರಂದು ನಡೆಯಲಿದೆ. ಆದ್ದರಿಂದ, ಸಂಬಂಧಿಸಿದ ಕ್ಷೇತ್ರದ ಮತದಾರರು ತಪ್ಪದೇ, ಗುರುತಿಸಿದ ಅಭ್ಯರ್ಥಿಗಳಿಗೆ ಮತದಾನ ಮಾಡಿ, ಕ್ಷೇತ್ರದ ಅಭಿವೃದ್ಧಿಗೆ ಆರಿಸಬೇಕು.

- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ