ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಕೊಯಿಲ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೈನ್ ಕಾಮಗಾರಿ ಸಲುವಾಗಿ ಹಾಕಿರುವ ಬೃಹತ್ ಗಾತ್ರದ ವಿದ್ಯುತ್ ಕಂಬಗಳು ಮಳೆಗಾಲದಲ್ಲಿ ವಾಲುತ್ತಿದ್ದ ಕಳವಳಕಾರಿ ಘಟನೆ ನಡುಯುತ್ತಿದೆ. ಈನಡುವೆ ಬೃಹತ್ ಕಂಬಗಳ ಬುಡದಿಂದಲೇ ಹಾಕಬೇಕಾಗಿದ್ದ ಕಾಂಕ್ರೀಟ್ ಬೆಡ್ ಬುಡದ ಬದಲು ಮಣ್ಣಿನ ಮೇಲ್ಭಾಗದಿಂದ ಹಾಕುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬರತೊಡಗಿದೆ. ಪ್ರಾಣಾಪಾಯಕ್ಕೆ ಕಾರಣವಾಗಲಿರುವ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.
ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಕೊಯಿಲ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೈನ್ ಕಾಮಗಾರಿ ಸಲುವಾಗಿ ಹಾಕಿರುವ ಬೃಹತ್ ಗಾತ್ರದ ವಿದ್ಯುತ್ ಕಂಬಗಳು ಮಳೆಗಾಲದಲ್ಲಿ ವಾಲುತ್ತಿದ್ದ ಕಳವಳಕಾರಿ ಘಟನೆ ನಡುಯುತ್ತಿದೆ. ಈನಡುವೆ ಬೃಹತ್ ಕಂಬಗಳ ಬುಡದಿಂದಲೇ ಹಾಕಬೇಕಾಗಿದ್ದ ಕಾಂಕ್ರೀಟ್ ಬೆಡ್ ಬುಡದ ಬದಲು ಮಣ್ಣಿನ ಮೇಲ್ಭಾಗದಿಂದ ಹಾಕುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬರತೊಡಗಿದೆ. ಪ್ರಾಣಾಪಾಯಕ್ಕೆ ಕಾರಣವಾಗಲಿರುವ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ. ಕೊಯಿಲದಲ್ಲಿ 33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ 13 ಕೋಟಿ ರುಪಾಯಿ ಮಂಜೂರಾಗಿ ಅಲ್ಲಿನ ಕಟ್ಟಡ ಕಾಮಗಾರಿ ಆಗಿ, ಅದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಜೋಡಣೆಯೂ ಆಗಿದೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೊಯಿಲದಿಂದ ಕರುವೇಲ್ ತನಕ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬ ನಿಲುಗಡೆಗೊಳಿಸುವ ಕೆಲಸ ನಡೆಯುತ್ತಿದೆ. ಈ ಕೆಲಸವನ್ನು ಮೈಸೂರು ಮೂಲದ ಗುತ್ತಿಗೆದಾರರೋರ್ವರು ಗುತ್ತಿಗೆ ವಹಿಸಿಕೊಂಡಿದ್ದು, ಅವರು ಸ್ಥಳೀಯ ವಿದ್ಯುತ್ ಗುತ್ತಿಗೆದಾರರೋರ್ವರಿಗೆ ಸಬ್ ಗುತ್ತಿಗೆ ನೀಡಿರುವುದಾಗಿ ತಿಳಿದು ಬಂದಿದೆ.
ಹೆದ್ದಾರಿ ಬದಿಯಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು ನಿಲುಗಡೆಗೊಳಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಕಂಬವನ್ನು ನೆಲದ ಅಡಿಯಲ್ಲಿ 6 ಅಡಿಯಷ್ಟು ಹೊಂಡ ಮಾಡಿ ಹೂಳುವಂತದ್ದು, ಮತ್ತು ಅದು ಧರೆಗುರುಳದಂತೆ ಅದರ ಸುತ್ತ ಕಾಂಕ್ರೀಟ್ ಮಿಶ್ರಣ ಹಾಕಿ ಗಟ್ಟಿಗೊಳಿಸುವಂತದ್ದು, ಕಾಮಗಾರಿಯ ನಿಯಮವಾಗಿದೆ. ಆದರೆ ಅಳವಡಿಸಲಾದ ಕಂಬಗಳಿಗೆ ಕಾಂಕ್ರೀಟ್ ಮಿಶ್ರಣ ಹಾಕದೆ ಮಳೆಗಾಲದಲ್ಲಿ ಈ ಪರಿಸರದಲ್ಲಿ ಮಣ್ಣು ಮೆದುವಾದೊಡನೆ ಹಿಡಿತ ಕಳೆದುಕೊಂಡು ಕೆಲವೆಡೆ ಬೃಹತ್ ಕಂಬಗಳು ವಾಲಿ ಅಪಾಯಕಾರಿ ಸ್ಥಿತಿ ಮೂಡಿಸಿತ್ತು. ಇದೀಗ ಕಾಂಕ್ರೀಟ್ ಮಿಶ್ರಣ ಹಾಕಲಾಗುತ್ತಿದ್ದು, ಮಣ್ಣಿನ ಮೇಲ್ಭಾಗದಲ್ಲಿಯೇ ಕಂಬಗಳಿಗೆ ಪಟ್ಟಿ ಕಟ್ಟಿ ಕಾಂಕ್ರೀಟ್ ಮಿಶ್ರಣ ಹಾಕಲಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.34 ನೇ ನೆಕ್ಕಿಲಾಡಿ ಗ್ರಾಮದ ಮಾಜಿ ಅಧ್ಯಕ್ಷ ಪ್ರಶಾಂತ್ ಗಾಣಿಗ ಕಾಮಗಾರಿಯ ಬಗ್ಗೆ ಪ್ರತಿಕ್ರಿಯಿಸಿ, ಬೃಹತ್ ಗಾತ್ರದ ವಿದ್ಯುತ್ ಕಂಬ ಹಾಕುವಾಗ ಆಳವಾದ ಹೊಂಡ ತೆಗೆದು, ಮಳೆಗಾಲದಲ್ಲಿ ಕಂಬಗಳು ವಾಲತೊಡಗಿದವು. ಇದೀಗ ಕಂಬಕ್ಕೆ ಮಣ್ಣಿನ ಮೇಲ್ಭಾಗದಲ್ಲಿ ಕಾಂಕ್ರೀಟ್ ಬೆಡ್ ಹಾಕಲಾಗುತ್ತಿದೆ. ಇದು ಯಾವ ಮಟ್ಟಗೆ ಸುರಕ್ಷತೆ ತಂದೊಡ್ಡುತ್ತದೋ ತಿಳಿದಿಲ್ಲ. ಮೇಲ್ನೋಟಕ್ಕೆ ಈ ಕೆಲಸ ಕಳಪೆಯಾಗಿದೆ. ಇಲಾಖಾಧಿಕಾರಿಗಳು ಪ್ರಾಮಾಣಿಕವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿಯ ಉದ್ಯಮಿ , ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರ ಪ್ರತಿಕ್ರಿಯಿಸಿ, ಕಾಮಗಾರಿಯ ಬಗ್ಗೆ ದೂರುಗಳು ಸತತವಾಗಿ ಕೇಳಿ ಬರುತ್ತಿತ್ತು. ಆದರೆ ನಾನೇ ಖುದ್ದು ಕಾಮಗಾರಿಯನ್ನು ವೀಕ್ಷಿಸಲು ಹೋದಾಗ ಮಣ್ಣಿನ ಮೇಲ್ಭಾಗದಲ್ಲಿಯೇ ಪಟ್ಟಿ ಅಳವಡಿಸಿ ಕಾಂಕ್ರೀಟ್ ಮಿಶ್ರಣ ಹಾಕುವ ಸಿದ್ಧತೆಯಲ್ಲಿರುವುದನ್ನು ಕಂಡು ಕಳವಳಗೊಂಡೆ ಎಂದು ಆಗ್ರಹಿಸಿದ್ದಾರೆ. ಲೋಪವಿದ್ದರೆ ಕ್ರಮ : ಮೆಸ್ಕಾಂ ಎಇ ಬೃಹತ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯದ ಮೇಲುಸ್ತುವಾರಿ ಈ ಹಿಂದಿನ ಎಇ ನೋಡಿಕೊಳ್ಳುತ್ತಿದ್ದರು. ಅವರು ವರ್ಗಾವಣೆಗೊಂಡಿದ್ದು, ಪ್ರಸಕ್ತ ನಾನು ಪ್ರಭಾರ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಬೃಹತ್ ಕಂಬಗಳನ್ನು ಅಳವಡಿಸಿದ ಬಳಿಕ ಕೊನೆಯ ಹಂತವಾಗಿ 4 ಅಡಿ ಸುತ್ತಳತೆಯ ಕಾಂಕ್ರೀಟ್ ಕವಚ ನಿರ್ಮಾಣದಲ್ಲಿ ಲೋಪಗಳೇನಾದರೂ ಆಗಿದ್ದಲ್ಲಿ ಪರಿಶೀಲನೆ ನಡೆಸಿ ಇಲಾಖಾತ್ಮಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಸಕ್ತ ಉಪ್ಪಿನಂಗಡಿ ವಲಯ ಮೆಸ್ಕಾಂ ಎಇ ರಾಜೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.