ಸಾರಾಂಶ
ಉಪ್ಪಿನಂಗಡಿ: ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹಾಗೂ ನೇತ್ರಾವತಿ- ಕುಮಾರಧಾರ ನದಿಗಳ ಉಗಮ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಶಾಂತವಾಗಿಯೇ ಹರಿಯುತ್ತಿದ್ದ ನದಿಗಳ ನೀರಿನ ಮಟ್ಟವು ಶುಕ್ರವಾರ ಮಧ್ಯಾಹ್ನದಿಂದ ಏರಿಕೆಯಾಗತೊಡಗಿದ್ದು, ಪ್ರವಾಹದ ಭೀತಿ ತಂದೊಡ್ಡಿವೆ. ಹಲವು ಕಡೆ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ಮಧ್ಯಾಹ್ನ ಏರಿಕೆಯಾದ ನದಿ ನೀರು: ಇಲ್ಲಿನ ನದಿಗಳ ಅಪಾಯದ ಮಟ್ಟ ೩೧.೦೫ ಆಗಿದ್ದು, ಶುಕ್ರವಾರದಂದು ೩೦ ಮೀಟರ್ ವರೆಗೆ ನದಿ ನೀರಿನ ಮಟ್ಟವು ದಾಖಲಾಗಿತ್ತು.ನದಿಯಲ್ಲಿ ನೀರಿನ ಮಟ್ಟ ಹಳೆಗೇಟು ಬಳಿಯ ನೇತ್ರಾವತಿ ನದಿ ಪಾತ್ರದ ನಿವಾಸಿ ಐತ ಮುಗೇರ ಅವರ ಮನೆಯ ಬಳಿ ನದಿ ನೀರು ಆಗಮಿಸಿದೆ. ನದಿಯಲ್ಲಿ ನೀರು ಹೆಚ್ಚಾಗುವ ಹೊತ್ತಿನಲ್ಲಿ ಸ್ಥಳಾಂತರಕ್ಕೆ ಕಂದಾಯಾಧಿಕಾರಿಗಳು ಸೂಚಿಸಿದ್ದರಿಂದ ಅವರ ಕುಟುಂಬವು ವರ್ಷಂಪ್ರತಿಯಂತೆ ಈ ಬಾರಿಯೂ ಅವರ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದೆ.
ಕುಮಾರಧಾರ ನದಿಯ ನೀರಿನಿಂದಾಗಿ ನಟ್ಟಿಬೈಲ್‌ನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಜಲಾವೃತವಾಗಿರುವ ಕೃಷಿ ತೋಟಗಳು ಹಾಗೆಯೇ ಇವೆ.ಉಪ್ಪಿನಂಗಡಿಯಲ್ಲಿ ಉಭಯ ನದಿಗಳು ಉಕ್ಕೇರಿ ಮೇಲೆ ಬಂದು ಶ್ರೀ ಸಹಸ್ರಲಿಂಗೇವರ ದೇವಾಲಯದ ಧ್ವಜಸ್ತಂಭದ ಬಳಿ ಸಂಗಮಿಸಿದರೆ ಪವಿತ್ರ ಗಂಗಾಪೂಜೆ ನೆರವೇರಿಸಿ ಸಂಗಮ ತೀರ್ಥ ಸ್ನಾನ ಮಾಡುವುದು ವಾಡಿಕೆ. ಇದನ್ನು ನಿರೀಕ್ಷಿಸಿ ನೂರಾರು ಭಕ್ತರು ಗುರುವಾರ ರಾತ್ರಿಯಿಂದಲೇ ಉಪ್ಪಿನಂಗಡಿಯ ದೇವಾಲಯದತ್ತ ಆಗಮಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕ ದಳ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ.
ಕಾಳಜಿ ಕೇಂದ್ರದ ವ್ಯವಸ್ಥೆ: ಸರ್ಕಾರಿ ಪದವಿ ಪೂರ್ವ ಕಾಲೇಜು, ಪುಳಿತ್ತಡಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ನಾಡ ಕಚೇರಿಯಲ್ಲಿ ದಿನದ ೨೪ ಗಂಟೆ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ.