ಸಾರಾಂಶ
ಜಿಲ್ಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಾರ್ಯಾಗಾರ । ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಮಾಹಿತಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಅ. 25 ರಂದು ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ತಿಳಿಸಿದರು.ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ 64 ಮೆಟ್ರಿಕ್ ನಂತರದ ಹಾಸ್ಟೆಲ್ ಗಳಲ್ಲಿ ಪರೀಕ್ಷೆಗಳನ್ನು ಅ. 21ರಂದು ನಡೆಸಲಾಗುತ್ತದೆ. ಇನ್ ಸೈಟ್ ಐಎಎಸ್ ಕೋಚಿಂಗ್ ಅಕಾಡೆಮಿಯಿಂದಲೇ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ ಒಎಂಆರ್ ಶೀಟ್ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ಸಿಗಲಿ ಎಂಬ ಕಾರಣಕ್ಕೆ ಒಎಂಆರ್ ಶೀಟ್ ನಲ್ಲಿಯೇ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಪರೀಕ್ಷೆ ನಡೆಸಿದ ಬಳಿಕ ಪ್ರತಿ ಹಾಸ್ಟೆಲ್ ನಲ್ಲಿ ತಲಾ 10 ಟಾಪರ್ ಗಳನ್ನು ಮಾಹಿತಿ ಕಾರ್ಯಾಗಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ಜಿಲ್ಲೆ ಯಲ್ಲಿ ಮೊದಲ 50 ಸ್ಥಾನ ಪಡೆಯುವ ವಿದ್ಯಾರ್ಥಿಗಳು ಇನ್ ಸೈಟ್ ಐಎಎಸ್ ಕೋಚಿಂಗ್ ಅಕಾಡೆಮಿ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಲಿದ್ದಾರೆ. ಹೀಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಅಕಾಡೆಮಿಯಲ್ಲಿ ಉಚಿತ ತರಬೇತಿಯನ್ನು ಯಾವಾಗಲಾದರೂ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಪರೀಕ್ಷೆಗಳ ಸ್ವರೂಪ ಹೇಗಿರಲಿದೆ ಎನ್ನುವುದನ್ನು ಮನವರಿಕೆ ಮಾಡುವ ಕಾರಣಕ್ಕೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರಮುಖವಾಗಿ ಹಾಸ್ಟೆಲ್ ಗಳಲ್ಲಿ ಇದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.ಮುಂದಿನ 3 ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಕನಿಷ್ಠ ಪಕ್ಷ 100 ಮಂದಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವಂತೆ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ಕಾರಣದಿಂದಲೇ ವಿದ್ಯಾರ್ಥಿಗಳನ್ನು ಈಗಿನಿಂದಲೇ ತರಬೇತಿಗೊಳಿಸುವ ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಅ. 25ರಂದು ನಡೆಯಲಿರುವ ಮಾಹಿತಿ ಕಾರ್ಯಾಗಾರದಲ್ಲಿ ಐಎಎಸ್ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಇನ್ ಸೈಟ್ ಅಕಾಡೆಮಿ ಸಿಬ್ಬಂದಿ ವಿದ್ಯಾರ್ಥಿಗಳ ಗೊಂದಲ ಪರಿಹರಿಸಲಿದ್ದಾರೆ. ಇದಲ್ಲದೆ ಡಿಫೆನ್ಸ್ ನಲ್ಲಿ ನೇಮಕಾತಿ ಹೇಗೆ ನಡೆಯುತ್ತದೆ ಎಂಬ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದರು.ಈ ಬಾರಿ ದಸರಾ ಉತ್ಸವದಲ್ಲಿ ಚಿಕ್ಕಮಗಳೂರಿನ ತೇಜಸ್ವಿ ವಿಸ್ಮಯ ಎಂಬ ಶೀರ್ಷಿಕೆ ಸ್ತಬ್ಧ ಚಿತ್ರಕ್ಕೆ ಸಮಾಧಾನಕರ ಬಹುಮಾನ ಬಂದಿದೆ. ಕಳೆದ ವರ್ಷ ಕಾಫಿ ನಾಡಿನ ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಬಂದಿತ್ತು. ಹೀಗಾಗಿ ಈ ಬಾರಿ ನಮ್ಮ ಸ್ತಬ್ಧ ಚಿತ್ರಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾದರೂ ಸಮಾಧಾನಕರ ಬಹುಮಾನ ಸಿಕ್ಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಉಪಸ್ಥಿತರಿದ್ದರು.ಫೋಟೋ ಫೈಲ್ ನೇಮ್ 18 ಕೆಸಿಕೆಎಂ 3 ಎಚ್.ಎಸ್.ಕೀರ್ತನಾ