ಸಾರಾಂಶ
ಹಾವೇರಿ: ಅನಧಿಕೃತ ಬಡಾವಣೆಗಳಿಂದಾಗಿ ಜಿಲ್ಲಾ ಕೇಂದ್ರದ ಸೌಂದರ್ಯ ಹಾಳಾಗುತ್ತಿದೆ. ಪಾರ್ಕ್, ಸುಸಜ್ಜಿತ ರಸ್ತೆ, ಚರಂಡಿಗಳಿಲ್ಲದೇ ಬಡಾವಣೆ ನಿರ್ಮಿಸಲಾಗುತ್ತಿದೆ. ಅಕ್ರಮ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ದೇವರು ಬಂದರೂ ನಗರದ ಪರಿಸ್ಥಿತಿ ಸುಧಾರಿಸಲು ಆಗಲ್ಲ, ಹೀಗಾಗಿ ಯಾರೇ ಅನಧಿಕೃತ ಬಡಾವಣೆ ನಿರ್ಮಿಸಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು ಮಾಡಿದರು.
ಸ್ಥಳೀಯ ನಗರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಎಷ್ಟೇ ಪ್ರಭಾವಿ ವ್ಯಕ್ತಿ ಇದ್ದರೂ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ. ಕಾನುನುಬದ್ಧವಾಗಿ ಹೊಸದಾಗಿ ಬಡಾವಣೆ ನಿರ್ಮಿಸಲು ಸೂಚಿಸಿ ಎಂದು ಆದೇಶಿಸಿದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರದಲ್ಲಿನ ಅನಧಿಕೃತ ಬಡಾವಣೆಗಳ ಬಗ್ಗೆ ನಿಗಾ ವಹಿಸಬೇಕು. ಹೊಸ ಬಡಾವಣೆ ನಿರ್ಮಿಸುವಾಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅನಧಿಕೃತ ಬಡಾವಣೆ ತಲೆ ಎತ್ತದಂತೆ ನೋಡಿಕೊಳ್ಳಬೇಕು. ತೆರಿಗೆ ವಸೂಲಿ ಬಗ್ಗೆ ವಿಶೇಷ ಅಭಿಯಾನ ನಡೆಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಬಸವರಾಜ ಬೆಳವಡಿ ಮಾತನಾಡಿ, ನಗರದಲ್ಲಿ ಸೈಟ್‌ಗಳ ಬೆಲೆ ದುಬಾರಿಯಾಗಿದೆ. ಆದರೆ, ಹೊಸ ಬಡಾವಣೆಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ. ಅಲ್ಲಿನ ರಸ್ತೆಗಳು, ಚರಂಡಿಗಳು ಒಂದೇ ವರ್ಷದಲ್ಲಿ ಕಿತ್ತು ಹೋಗುತ್ತಿವೆ. ಆಗ ಅಲ್ಲಿನ ನಿವಾಸಿಗಳು ನಗರಸಭೆಗೆ ಬಂದು ಪ್ರತಿಭಟಿಸುತ್ತಾರೆ. ಹೀಗಾಗಿ ಗುಣಮಟ್ಟದ ಕಾಮಗಾರಿ ಆಗುವಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.ಆಗ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ನಗರಸಭೆ ಸದಸ್ಯರೇ ತಮ್ಮ ವಾರ್ಡ್‌ಗಳಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಹೊಸ ಬಡಾವಣೆಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಸಭೆ ಮುಗಿದರೂ ಬಾರದ ಫೈಲ್: ನಗರದಲ್ಲಿ ಹಾಳಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರವುಗೊಳಿಸುವ ವಿಷಯ ಪ್ರಸ್ತಾಪವಾದಾಗ ಪ್ರತಿಕ್ರಿಯಿಸಿದ ಸದಸ್ಯ ಸಂಜೀವಕುಮಾರ ನೀರಲಗಿ, ನಗರಸಭೆಯಿಂದ ತಲಾ ಒಂದು ಘಟಕಕ್ಕೆ ₹4.25 ಲಕ್ಷ ವೆಚ್ಚದಲ್ಲಿ 6 ಘಟಕಗಳನ್ನು ಸ್ಥಾಪಿಸಿ 10 ವರ್ಷದ ಅವಧಿಗೆ ಲೀಸ್‌ಗೆ ನೀಡಲಾಗಿತ್ತು. ಆದರೆ, ಈ ವರೆಗೂ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದರು. ಇದಕ್ಕೆ ಸಂಬಂಧಿಸಿರುವ ಫೈಲ್ ತರುವಂತೆ ಕಿರಿಯ ಎಂಜಿನಿಯರ್‌ಗೆ ಸೂಚಿಸಿದರು. ಆಗ ಸದಸ್ಯರು ಫೈಲ್ ಬಂದ ಮೇಲೆ ಚರ್ಚಿಸೋಣ ಎಂದರು. ಆದರೆ, ಸಭೆ ಮುಗಿದರೂ ಫೈಲ್ ಬರಲಿಲ್ಲ. ಹೀಗಾಗಿ ಏನೂ ನಿರ್ಣಯ ಕೈಗೊಳ್ಳಲಿಲ್ಲ.ನಿವೇಶನ ವಾಪಸ್ ಪಡೆಯಲು ನಿರ್ಣಯ: ದಾನೇಶ್ವರಿ ನಗರದ ಸಿಟಿಎಸ್ ನಂ. 3317/ಬಿ/36 ಕ್ಷೇತ್ರ 891.21 ಚಮೀ ನಿವೇಶನವನ್ನು ಆಡಳಿತ ಮಂಡಳಿ ಇಲ್ಲದ ಸಮಯದಲ್ಲಿ ಅಧಿಕಾರಿಗಳೇ ನಿರ್ಣಯಿಸಿ ರಾಣಾ ಪ್ರತಾಪ ಅಸೋಸಿಯೇಶನ್ ಸಂಸ್ಥೆಯವರಿಗೆ ನೀಡಲಾಗಿದೆ. ಅದರಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ. ಈಗ ಅದರ ಬೆಲೆ ಅಂದಾಜು ₹10 ಕೋಟಿ ಇದೆ. ಹೀಗಾಗಿ ಈ ನಿವೇಶನವನ್ನು ನಗರಸಭೆಗೆ ವಾಪಸ್ ಪಡೆಯಬೇಕು ಎಂದು ಸದಸ್ಯ ಸಚಿನ್ ಡಂಬಳ್ ಆಗ್ರಹಿಸಿದರು. ಆಗ ನಿವೇಶನ ವಾಪಸ್ ಪಡೆಯಲು ನಿರ್ಣಯಿಸಲಾಯಿತು.
ಎಇಇಯಿಂದ ನಗರದ ನಿರ್ಲಕ್ಷ್ಯ: ನಗರಸಭೆಯ ಎಇಇ ರಾಯ್ಕರ್ ನಗರದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ. ಹೇಳಿದ ಯಾವುದೇ ಕೆಲಸ ಮಾಡುವುದಿಲ್ಲ. ಅಕ್ಕಮಹಾದೇವಿ ಹೊಂಡ, ಮುಲ್ಲಾನ ಕೆರಿ, ದುಂಡಿ ಬಸವೇಶ್ವರ ಕೆರಿ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಸದಸ್ಯ ಸಂಜೀವಕುಮಾರ ನೀರಲಗಿ ಕಿಡಿಕಾರಿದರು.ಆಗ ಶಾಸಕ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ, ಅಕ್ಕಮಹಾದೇವಿ ಹೊಂಡ ಅಭಿವೃದ್ಧಿಪಡಿಸಿ ಫುಡ್‌ಪಾರ್ಕ್, ಬೋಟಿಂಗ್ ವ್ಯವಸ್ಥೆ ಮಾಡೋಣ ಎಂದರು. ಆಗ ಸದಸ್ಯ ಲಾಲಸಾಬ ಚೋಪದಾರ, ಈ ಹಿಂದೆ ಅಕ್ಕಮಹಾದೇವಿ ಹೊಂಡಕ್ಕೆ ಹಾಕಿದ್ದ ಅನುದಾನ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಆಗ ಕೆರಳಿದ ಶಾಸಕ ರುದ್ರಪ್ಪ ಲಮಾಣಿ, ಅಕ್ಕಮದೇವಿ ಹೊಂಡಕ್ಕೆ ಹಾಕಿ ಹಣ ತಿಂದಾರ, ತಿಂದಾರ ಅಂತಾ ಬೊಬ್ಬೆ ಹೊಡಿತಾರ. ನಾನು ಒಂದು ರುಪಾಯಿ ತಿಂದದ್ದು ತೋರಿಸಿ, ನಾನು ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದು ಗರಂ ಆದರು. ಅರ್ಧಕೆಲಸ ಆಗಿದೆ. ಫುಟ್‌ಪಾತ್, ಕಾರಂಜಿ ಆಗಿತ್ತು. ಅದಕ್ಕೆ ಹೊಸ ಕಾಯಕಲ್ಪ ಕೊಟ್ಟು, ಕೆಲಸ ಪೂರ್ಣ ಮಾಡೋಣ ಎಂದರು. ಆಗ ಸದಸ್ಯರು ಸಮ್ಮತಿಸಿದರು.ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ಈಗ ಬೀದಿನಾಯಿಗಳಿಗೆ ಚರ್ಮರೋಗ ಬರುತ್ತಿದೆ. ಹೀಗಾಗಿ ಬೀದಿನಾಯಿಗಳನ್ನು ಹಿಡಿಯುವಂತೆ ಸಾಕಷ್ಟು ಒತ್ತಡವಿದೆ. ನಾಯಿಗಳನ್ನು ಹಿಡಿಯಲು, ಶೆಡ್ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಿ. ಚನ್ನಪ್ಪ ನಿರ್ವಹಿಸಿದರು.