ಕೇಂದ್ರ ಪೂರೈಸಿದ ಯೂರಿಯಾ ರಾಜ್ಯ ಸರ್ಕಾರದಿಂದ ಕಾಳಸಂತೆಗೆ

| Published : Jul 29 2025, 01:03 AM IST

ಕೇಂದ್ರ ಪೂರೈಸಿದ ಯೂರಿಯಾ ರಾಜ್ಯ ಸರ್ಕಾರದಿಂದ ಕಾಳಸಂತೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಗೊಬ್ಬರ ಸಿಗದೆ ರೈತ ಮಣ್ಣು ತಿಂದಿರುವ ವರದಿ ಗಮಿನಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ಇಲ್ಲಿಗೆ ಬಂದು ಚಂದ್ರಪ್ಪನಿಗೆ ಗೊಬ್ಬರ ನೀಡಿದ್ದೇವೆ. ಈ ಮೂಲಕ ರೈತರೊಂದಿಗೆ ಬಿಜೆಪಿ ಎಂದು ಅಭಯ ನೀಡಿದ್ದೇವೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ ಹೇಳಿದರು.

ಕೊಪ್ಪಳ:

ಕೇಂದ್ರ ಸರ್ಕಾರ ಪೂರೈಸಿದ ಯೂರಿಯಾ ಗೊಬ್ಬರವನ್ನು ರಾಜ್ಯ ಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲ ರೈತರಿಗೆ ದ್ರೋಹ ಮಾಡುತ್ತೇಲೆ ಬಂದಿದೆ. ಹೀಗಾಗಿ ರೈತರು ಗೊಬ್ಬರಕ್ಕಾಗಿ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸುವ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ ಕಿಡಿಕಾರಿದರು.

ಗೊಬ್ಬರ ಸಿಗದೆ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದ ತಾಲೂಕಿನ ಕುಣಿಕೇರಿ ಗ್ರಾಮದ ರೈತ ಚಂದ್ರಪ್ಪ ಬಡಗಿ ಮನೆಗೆ ಪಕ್ಷದ ನಿಯೋಗದೊಂದಿಗೆ ಸೋಮವಾರ ಭೇಟಿ ನೀಡಿ ಎರಡು ಚೀಲ ಯೂರಿಯಾ ಪೂರೈಕೆ ಮಾಡಿ ಮಾತನಾಡಿದ ಅವರು, 8,73,000 ಮೆಟ್ರಿಕ್ ಟನ್ ರಸಗೊಬ್ಬರ ಇದ್ದರೂ ಕೇವಲ 5,73,000 ಲಕ್ಷ ರಸಗೊಬ್ಬರ ಮಾತ್ರ ವಿತರಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಉಳಿದ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆಂದು ದೂರಿದರು.

ರೈತರು ಗೊಬ್ಬರ ಸಿಗದೆ ಸಂಕಷ್ಟ ಪಡುತ್ತಿದ್ದು ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದ ಅವರು, ಗೊಬ್ಬರ ಸಿಗದೆ ರೈತ ಮಣ್ಣು ತಿಂದಿರುವ ವರದಿ ಗಮಿನಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ಇಲ್ಲಿಗೆ ಬಂದು ಚಂದ್ರಪ್ಪನಿಗೆ ಗೊಬ್ಬರ ನೀಡಿದ್ದೇವೆ. ಈ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದೇವೆ. ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ರೈತರ ಧ್ವನಿಯಾಗಿ ನಮ್ಮ ನಾಯಕರು ಇರುತ್ತಾರೆ ಎಂದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯ:

ಕೇಂದ್ರ ಸರ್ಕಾರ ಪೂರೈಸುವ ಯೂರಿಯಾ ಗೊಬ್ಬರವನ್ನು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ಸರ್ಕಾರ ಎಡವಿದೆ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಕೇಂದ್ರ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳದೆ ಇರುವುದರಿಂದ ರೈತರಿಗೆ ಇದೀಗ ಯೂರಿಯಾ ರಸಗೊಬ್ಬರದ ಸಮಸ್ಯೆಯಾಗಿದೆ ಎಂದು ನಡಹಳ್ಳಿ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆವರ್ತನಿಧಿ ಮೂಲಕ ಮಾರ್ಚ್, ಏಪ್ರಿಲ್ ತಿಂಗಳಲ್ಲಿಯೇ ಯೂರಿಯಾ ರಸಗೊಬ್ಬರ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೆ ಮಾಡದೆ ಇರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದ ದೂರಿದ ಅವರು, ರಾಜ್ಯಾದ್ಯಂತ ರೈತ ಮೋರ್ಚಾ ವತಿಯಿಂದ ಸುತ್ತಾಡಿ ರೈತರ ಪರವಾಗಿ ಧ್ವನಿ ಎತ್ತಲಾಗುವುದು ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗೂರು, ಡಾ. ಬಸವರಾಜ ಕ್ಯಾವಟರ, ಮಹಾಂತೇಶ ಮೈನಳ್ಳಿ, ಗಣೇಶ ಹೊರತಟ್ನಾಳ ಸೇರಿದಂತೆ ಇತರರು ಇದ್ದರು. ನನಗೊಬ್ಬನೇ ಸಿಕ್ಕರೇ ಸಾಲದು-ಚಂದ್ರಪ್ಪ

ನಾನು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ನನಗೆ ಯೂರಿಯಾ ರಸಗೊಬ್ಬರ ನೀಡಿದ್ದಾರೆ. ಆದರೆ, ನನಗೊಬ್ಬನಿಗೆ ಸಿಕ್ಕರೆ ಸಾಲದು, ಎಲ್ಲ ರೈತರಿಗೂ ಸಿಗಬೇಕು ಎಂದು ರೈತ ಚಂದ್ರಪ್ಪ ಬಡಗಿ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ನನಗೆ ಸರ್ಕಾರದಿಂದಲೂ ನಾಲ್ಕು ಚೀಲ ರಸಗೊಬ್ಬರ ನೀಡಿದ್ದರು, ಈಗ ಬಿಜೆಪಿಯವರು ಎರಡು ಚೀಲ ನೀಡಿದ್ದಾರೆ. ನನಗೆ ಬೇಕಾಗಿದ್ದೇ 6 ಚೀಲವಾಗಿದ್ದು ಅಷ್ಟು ಸಿಕ್ಕಿದೆ. ಆದರೆ, ನನ್ನಂತೆಯೇ ಎಲ್ಲರಿಗೂ ಸಿಗಬೇಕಾಗಿದೆ ಎಂದರು.

ನಾನು ಕಳೆದೊಂದು ತಿಂಗಳಿಂದ ಯೂರಿಯಾ ರಸಗೊಬ್ಬರಕ್ಕಾಗಿ ಸುತ್ತಾಡಿದ್ದೇನೆ. ಎಲ್ಲಿಯೂ ಸಿಗಲಿಲ್ಲ. ಕೊಪ್ಪಳ ಮಾತ್ರವಲ್ಲದೆ ಪಕ್ಕದೂರಿಗೂ ಹೋಗಿ ಬಂದಿದ್ದೇನೆ. ಎಲ್ಲಿಯೂ ಸಿಗಲಿಲ್ಲ. ನಾನು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸರ್ಕಾರ ಮನೆಗೆ ತಂದುಕೊಟ್ಟಿದೆ ಎಂದು ಹೇಳಿದರು.