ಸಾರಾಂಶ
ಮುಳಗುಂದ ರೈತಸಂಘ, ಹಸಿರು ಸೇನೆ ಗ್ರಾಮ ಘಟಕದಿಂದ ಮನವಿಮುಳಗುಂದ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಮುಳಗುಂದ ವತಿಯಿಂದ ಸೋಮವಾರ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಬಿದ್ದು, ರೈತರ ಬದುಕು ಕಷ್ಟಕರವಾಗಿದೆ. ಯಾವುದೇ ಬೆಳೆ ಬಾರದೆ ಅಪಾರ ಹಾನಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೇವಲ ಚುನಾವಣೆ ಗೆಲ್ಲುವ ಸಲುವಾಗಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಎಲ್ಲ ಮೊತ್ತವನ್ನು ಬಳಕೆ ಮಾಡುತ್ತಿದ್ದು, ರೈತರಿಗೆ ಈವರೆಗೂ ಯಾವುದೇ ರೀತಿಯ ಬರ ಪರಿಹಾರ ಬಂದಿಲ್ಲ. ಇದರಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ.ಸರ್ಕಾರ ಪ್ರತಿ ತಿಂಗಳು ಮಹಿಳೆಯರಿಗೆ ೨೦೦೦ ರು.ಕೂಡುತ್ತೀರಿ ಆದರೆ ರೈತರಿಗೆ ಒಂದು ವರ್ಷಕ್ಕೆ ಕೇವಲ ೨೦೦೦ ರು. ಕೊಡುತ್ತೇನೆ ಎಂದು ಮೂಗಿಗೆ ತುಪ್ಪ ಸವರುತ್ತಾ, ಕುರುಡ ಜಾಣತನ ತೋರುತ್ತಿದೆ. ಇದು ಯಾವ ನ್ಯಾಯ. ಅದೇ ರೀತಿಯಾಗಿ ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿದೆ. ೨೦೨೨-೨೦೨೩ರಲ್ಲಿ ೧೭೦೦ ರು. ಬೆಲೆ ಇದ್ದ ರೈತರ ಹನಿ ನೀರಾವರಿಯ ಸ್ಲ್ರಿಂಕ್ಲರ್ ಪೈಪುಗಳು ಈ ನಿಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ೪೧೪೦.ರು ಮಾಡಿ ದುಪ್ಪಟ್ಟು ಬೆಲೆ ಹೆಚ್ಚಿಸಿ ರೈತರಿಗೆ ಮೋಸ ಮಾಡಿ ಹೊರೆ ಮಾಡಿದ್ದಿರಿ. ಉಚಿತ ಪ್ರಯಾಣ, ವಿದ್ಯಾನಿಧಿ, ಗೃಹಲಕ್ಷ್ಮಿ, ಭಾಗ್ಯಲಕ್ಷ್ಮೀ, ವಿದ್ಯಾನಿಧಿ ಯೋಜನೆಗಳಿಗೆ ಎಲ್ಲ ಅನುದಾನ ನೀಡಿ, ರೈತರಿಗೆ ಬರ ಪರಿಹಾರ ನೀಡದೆ ರೈತರನ್ನ ಇನ್ನಷ್ಟು ಸಂಕಷ್ಟದಲ್ಲಿ ಸಿಲುಕುವಂತೆ ಮಾಡುತ್ತಿದೆ. ತಾವುಗಳು ಈ ಬಗ್ಗೆ ಪರಿಶೀಲಿಸಿ ಹನಿ ನೀರಾವರಿಯ ಸ್ಲ್ರಿಂಕ್ಲರ್ ಪೈಪುಗಳ ಸಬ್ಸಿಡಿ ಕಡಿಮೆಗೊಳಿಸಬೇಕು. ಅದೇ ರೀತಿಯಾಗಿ ರೈತರಿಗೆ ಬರ ಪರಿಹಾರವೆಂದು ಒಂದು ಎಕರೆಗೆ ಕನಿಷ್ಠ ೫೦೦೦ ರು. ಕೊಡಲೆಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಮಹಾಂತೇಶ ಗುಂಜಳ, ದೇವಪ್ಪ ದೋಟಿಕಲ್, ಮಹಮ್ಮದಅಲಿ ಶೇಖ, ಮುತ್ತಣ್ಣ ಪಲ್ಲೇದ ಸೇರಿ ಅನೇಕರು ಇದ್ದರು.