ಸಾರಾಂಶ
ಗಜೇಂದ್ರಗಡ: ಪಟ್ಟಣಕ್ಕೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಸ್ಥಳೀಯ ಕೆ.ಕೆ. ಸರ್ಕಲ್ ವೃತ್ತದಲ್ಲಿ ಮಾನವ ಸರವಳಿ ನಿರ್ಮಿಸಿ ಸರ್ಕಲ್ ಬಂದ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಈ ವೇಳೆ ಎಸ್‌ಎಫ್‌ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ ಮಾತನಾಡಿ, ಗಜೇಂದ್ರಗಡ ಪಟ್ಟಣವು ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಗರ ಆಗಿದ್ದು, ಇಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು ೧೫೦೦ ಕ್ಕೂ ಹೆಚ್ಚು ಇದೆ. ಅದರ ಜತೆಗೆ ೪ ಪಿಯು ಕಾಲೇಜಗಳು, ಒಂದು ಡಿಪ್ಲೊಮಾ ಕಾಲೇಜು. ಹಾಗೇ ೪ ಡಿಗ್ರಿ ಕಾಲೇಜುಗಳು ಇವೆ. ಇಲ್ಲಿ ಸುಮಾರು ೧೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಗ್ರಿ ಓದುತ್ತಿದ್ದಾರೆ. ಕೂಡಲೆ ಪಟ್ಟಣಕ್ಕೆ ಬಾಲಕರ ಹಾಸ್ಟೆಲ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.ಎಸ್‌ಎಫ್‌ಐ ನೇತೃತ್ವದಲ್ಲಿ ಕಳೆದ ೭-೮ ವರ್ಷಗಳಿಂದ ಹೋರಾಟ ಮಾಡಿ ಶಾಸಕರು, ಸಂಸದರುಗಳಿಗೆ ಅಧಿಕಾರಿಗಳಿಗೆ ಮನವಿ ನೀಡುವ ಮೂಲಕ ಒತ್ತಾಯ ಮಾಡುತ್ತಲೆ ಬಂದಿದ್ದೇವೆ. ಜು.೫ ರಂದು ಗಜೇಂದ್ರಗಡದಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.ಜು. ೧೦ ರಂದು ರೋಣ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ನೀಡಿದ್ದೇವೆ. ಈ ಕುರಿತು ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು ಈ ಕುರಿತು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಚಂದ್ರು ರಾಠೋಡ ಮಾತನಾಡಿ, ಜು. ೧೫ ರಿಂದ ಮುಂಗಾರು ಅಧಿವೇಶನ ಪ್ರಾರಂಭಗೊಂಡಿದ್ದು, ಶಾಸಕರು ಸರ್ಕಾರದ ಗಮನಕ್ಕೆ ತಂದು ಹಾಸ್ಟೆಲ್ ಸ್ಥಾಪಿಸಲು ಈ ಹೋರಾಟದ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.ಒಂದು ತಾಸು ಗಟ್ಟಲೆ ಕೆ.ಕೆ ಸರ್ಕಲ್ ಬಂದ ಮಾಡಿದ ಮೇಲೆ ಅಧಿಕಾರಿಗಳು ಎಚ್ಚೆದ್ದು ಹೋರಾಟದ ಸ್ಥಳಕ್ಕೆ ಬಂದ ಶಿರಸ್ತೇದಾರರು, ಸ್ಥಳೀಯ ಪಿಎಸ್ ಐ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದರು ಆಗ ಅಧಿಕಾರಿಗಳು, ಪೋಲಿಸರ ಹಾಗೂ ವಿದ್ಯಾರ್ಥಿ ಮುಖಂಡರ ಮಧ್ಯ ಕೆಲ ಹೊತ್ತು ವಾಗ್ವಾದ ನಡೆಯಿತು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಧಿಕಾರಿಗಳು ಮತ್ತು ಪೊಲೀಸ್‌ರು ಮನವಿ ಮಾಡಿದ ಮೇಲೆ ಹೋರಾಟವನ್ನು ಕೆ.ಕೆ ಸರ್ಕಲ್ ನಿಂದ ತಹಸೀಲ್ದಾರರ ಕಚೇರಿಯಲ್ಲಿ ಮುಂದುವರಿಸಲಾಯಿತು.
ಕಚೇರಿಯಲ್ಲಿ ಶಿರಸ್ತೇದಾರರು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಹೋರಾಟದ ಕುರಿತು ತಿಳಿಸಿದ ಮೇಲೆ ಉಪನಿರ್ದೇಕರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕಳುಹಿಸಿರುವ ಪ್ರಸ್ತಾವನೆಯನ್ನು ಲಿಖಿತ ರೂಪದಲ್ಲಿ ನೀಡಿದ ಮೇಲೆ ಹೋರಾಟ ಹಿಂಪಡೆಯಲಾಯಿತು. ಪತ್ರಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಮಳೆಯನ್ನೇ ಲೆಕ್ಕಿಸದೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.