ಸಾರಾಂಶ
ಚಿಕ್ಕಮಗಳೂರು, ಭದ್ರಾ ಅಭಯಾರಣ್ಯದೊಳಗಿನ ಮುತ್ತೋಡಿ - ಹೆಬ್ಬೆ ಮಾರ್ಗವಾಗಿ ನರಸಿಂಹರಾಜಪುರ ಸಂಪರ್ಕಿಸುವ ರಸ್ತೆ ಪುನರ್ ನಿರ್ಮಾಣ ಕಾಮಗಾರಿಯನ್ನು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು: ಪರಿಸರವಾದಿಗಳ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭದ್ರಾ ಅಭಯಾರಣ್ಯದೊಳಗಿನ ಮುತ್ತೋಡಿ - ಹೆಬ್ಬೆ ಮಾರ್ಗವಾಗಿ ನರಸಿಂಹರಾಜಪುರ ಸಂಪರ್ಕಿಸುವ ರಸ್ತೆ ಪುನರ್ ನಿರ್ಮಾಣ ಕಾಮಗಾರಿಯನ್ನು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೈಗೆತ್ತಿಕೊಳ್ಳಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು - ನರಸಿಂಹರಾಜಪುರ ರಸ್ತೆ ಈ ಹಿಂದೆ ಭದ್ರಾ ಅಣೆಕಟ್ಟೆ ನಿರ್ಮಾಣದ ನಂತರ ಮುಳುಗಡೆಯಾಗಿದೆ. ಇದೀಗ ಆ ರಸ್ತೆಯ ಉಳಿದ ಭಾಗಗಳು ಭದ್ರಾ ಅಭಯಾರಣ್ಯದ ಭಾಗವಾಗಿದ್ದು, ಪೂರ್ಣವಾಗಿ ಅಭಯಾರಣ್ಯದ ಒಳಗೆ ಸಾಗುತ್ತದೆ. ಜೊತೆಗೆ ಈ ರಸ್ತೆ ಸಾಕಷ್ಟು ವನ್ಯಜೀವಿಗಳ ಓಡಾಟದ ಹಾದಿಯೂ ಆಗಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿನ ಮಾಜಿ ಗೌರವ ವನ್ಯ ಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಭದ್ರಾ ಅಭಯಾರಣ್ಯ ರಾಜ್ಯದ ಜನವಸತಿ ಇಲ್ಲದ ಅತ್ಯಂತ ಸುರಕ್ಷಿತ ಅರಣ್ಯವಾಗಿದೆ. 2000- 2002ರಲ್ಲಿ ಅಭಯಾರಣ್ಯ ದೊಳಗಿದ್ದ 13 ಹಳ್ಳಿಗಳು ಹಾಗೂ ಅವುಗಳಲ್ಲಿ ವಾಸವಾಗಿದ್ದ 700 ಕುಟುಂಬಗಳನ್ನು ಸರ್ಕಾರ ಕೋಟ್ಯಂತರ ರು. ವ್ಯಯಿಸಿ ಸ್ಥಳಾಂತರಗೊಳಿಸಿತು. ಅವರ ಈ ಪುನರ್ವಸತಿ ಯೋಜನೆ ದೇಶದಲ್ಲೇ ಅತ್ಯಂತ ಮೆಚ್ಚುಗೆಗಳಿಸಿದ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಟ್ಟು 500ಚ. ಕಿಮೀ ವಿಸ್ತಾರದ ಈ ಅಭಯಾರಣ್ಯವನ್ನು 1998ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಅಭಯಾರಣ್ಯಕ್ಕೆ 50 ವರ್ಷಗಳು ತುಂಬಿವೆ. ಅರಣ್ಯ ಇಲಾಖೆ ಅತ್ಯಂತ ಎಚ್ಚರದಿಂದ ಈ ಅಭಯಾರಣ್ಯವನ್ನು ಕಾಪಾಡಿಕೊಂಡು ಬಂದಿದ್ದು, ಪ್ರತೀ ವರ್ಷ ಇಲಾಖೆ ಕೋಟ್ಯಂತರ ರು.ಗಳನ್ನು ಅರಣ್ಯ ರಕ್ಷಣೆಗಾಗಿ ವ್ಯಯಿಸುತ್ತಿದೆ. ಸರ್ಕಾರ ಸಹ ಈ ಅಭಯಾರಣ್ಯವನ್ನು ‘ಕ್ರಿಟಿಕಲ್ ಟೈಗರ್ ಹ್ಯಾಬಿಟೇಟ್’ (ಅತ್ಯಂತ ಜಟಿಲ ಹುಲಿ ಆವಾಸ ಸ್ಥಾನ) ಎಂದು 2008 ರಲ್ಲೇ ಘೋಷಿಸಿದೆ ಎಂದು ಹೇಳಿದ್ದಾರೆ. ಈ ಅಭಯಾರಣ್ಯದಲ್ಲಿ ಆನೆಗಳ ಸಂಖ್ಯಾ ಬಾಹುಳ್ಯವೂ ಇದ್ದು, ಇದು ಅತ್ಯಂತ ಅಪರೂಪದ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವೂ ಆಗಿದೆ. ಅಭಯಾರಣ್ಯದಲ್ಲಿ ಭದ್ರಾ ನದಿ ನೀರಿನ ಹರಿವನ್ನು ಅಧಿಕಗೊಳಿಸುವ ಉಪ ನದಿಗಳಾದ ತಡಬೇಹಳ್ಳ, ಹೆಬ್ಬೇಹಳ್ಳ ಹಾಗೂ ಸೋಮವಾಹಿನಿ ಹಳ್ಳಗಳು ಹರಿದು ಹೋಗುತ್ತವೆ. ಈ ಅಂಶಗಳನ್ನು ಪರಿಗಣಿಸದೆ ಜನ, ವಾಹನ ಓಡಾಟಕ್ಕೆ ಅವಕಾಶ ನೀಡುವ ಅತ್ಯಂತ ಅಪಾಯಕಾರಿಯಾದ ರಸ್ತೆ ಪುನರ್ ನಿರ್ಮಾಣದ ಕಾಮಗಾರಿ ಪ್ರಸ್ತಾವನೆಯೊಂದನ್ನು ಕೈಗೊಳ್ಳಲು ಮುಂದಾಗಿರುವು ಆತಂಕಕಾರಿಯಾಗಿದೆ. ಅಭಯಾರಣ್ಯಕ್ಕೆ ಮಾರಕವಾಗುವ ಈ ರಸ್ತೆ ಪುನರ್ ನಿರ್ಮಾಣ ಕಾಮಗಾರಿಗೆ ನಮ್ಮ ಪೂರ್ಣ ವಿರೋಧವಿದೆ ಎಂದು ತಿಳಿಸಿದ್ದಾರೆ.