ಕೆರೆಗಳ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಅಗತ್ಯ: ಕಠಾರಿಯಾ

| Published : Apr 29 2025, 12:45 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಕೆರೆಗಳನ್ನು ಕೂಡಲೇ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

- ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಕೆರೆಗಳನ್ನು ಕೂಡಲೇ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೆರವುಗೊಳಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ ಇದುವರೆಗೂ ಕೆರೆಗಳ ಒತ್ತುವರಿ ತೆರೆವುಗೊಳಿಸಿಲ್ಲ. ಇನ್ನು ಮುಂದೆ ಹಾಗಾಗದಂತೆ ಸೂಕ್ತ ಕ್ರಮ ವಹಿಸಿ ಎಂದರು

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಕಂದಾಯ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ೧.೮೧೦ ಕೆರೆಗಳಿದ್ದು ಈಗಾಗಲೇ ೧.೭೪೪ ಕೆರೆಗಳ ಸರ್ವೆ ಕಾರ್ಯ ಪೂರ್ಣ ಗೊಂಡಿದೆ. ಇನ್ನು ೬೬ ಕೆರೆಗಳು ಅಳತೆಯಾಗಬೇಕಾಗಿದ್ದು, ೭೭೭ ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಇವುಗಳಲ್ಲಿ ೩೦೧ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಇನ್ನೂ ೪೭೬ ಕೆರೆಗಳು ಬಾಕಿಯಿವೆ ಎಂದ ಅವರು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ೧೨೪ ಕೆರೆಗಳಿದ್ದು ಈ ಪೈಕಿ ೩೪ ಕೆರೆಗಳು ಹಿಡುವಳಿ, ಅರಣ್ಯ, ಗೋಮಾಳ ಜಮೀನಿನಲ್ಲಿವೆ. ಪಿ.ಆರ್.ಇ.ಡಿ. ವ್ಯಾಪ್ತಿಯಲ್ಲಿ ೮೮೦ ಕೆರೆಗಳಿದ್ದು ೮೭೬ ಕೆರೆಗಳ ಸರ್ವೆ ಕಾರ್ಯ ಮುಗಿದಿದ್ದು, ಇನ್ನು ೪ ಕೆರೆಗಳ ಸರ್ವೇ ಕಾರ್ಯ ಬಾಕಿಯಿದೆ. ೩೫೬ ಕೆರೆಗಳು ಒತ್ತುವರಿಯಾಗಿದ್ದು, ೧೮೪ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ ೧೭೨ ಕೆರೆಗಳು ಒತ್ತುವರಿ ತೆರವುಗೊಳಿಸಲು ಬಾಕಿಯಿವೆ. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೮೩೪ ಕೆರೆಗಳಿದ್ದು, ಅವುಗಳಲ್ಲಿ ಅಳತೆಯಾಗಿರುವ ಕೆರೆಗಳು ೭೮೫, ಅಳತೆ ಮಾಡಲು ಬಾಕಿ ಇರುವ ಕೆರೆಗಳು ೪೯, ಒತ್ತುವರಿ ಗುರುತಿಸಿದ ಕೆರೆಗಳು ೩೭೯, ಒತ್ತುವರಿ ತೆರವುಗೊಳಿಸಿರುವ ಕೆರೆಗಳು ೧೦೩, ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಕೆರೆಗಳು ೨೭೬. ಈ ಕೆರೆಗಳ ಒತ್ತುವರಿಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದರು.

ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಂಬಂಧ ಅರಿವು ಮೂಡಿಸುವಂತೆ ಸೂಚಿಸಲಾಗಿತ್ತು, ಜಿಲ್ಲೆಯಲ್ಲಿ ತೋಟ ಗಾರಿಕೆ ಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶಗಳಿವೆ. ರೈತರಿಗೆ ತರಬೇತಿ ನೀಡುವಂತೆ ತಿಳಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಸಭೆಗೆ ಮಾಹಿತಿ ನೀಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳಕ್ಕೆ ರೈತರನ್ನು ಅಧ್ಯಯನಕ್ಕಾಗಿ ಕರೆದುಕೊಂಡು ಹೋಗಿ ಬರಲಾಗಿದೆ ಎಂದರು.ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕಿ ಸುಜಾತಾ ಸಭೆಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು. ತರೀಕೆರೆ ತಾಲೂಕಿನ ಬೇಗೂರು, ಮಲ್ಲೇನಹಳ್ಳಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿ.ಆರ್.ಇ.ಡಿ. ಇಂಜಿನಿಯರ್ ತಿಳಿಸಿದರು.ಎಲ್ಲಾ ಇಲಾಖೆಗಳು ಕೂಡ ಇ-ಕಚೇರಿ ಮುಖಾಂತರ ಕಾರ್ಯ ನಿರ್ವಹಿಸಬೇಕು. ಚಿಕ್ಕಮಗಳೂರು ಜಿಲ್ಲೆ ಪೈಲೆಟ್ ಜಿಲ್ಲೆ ಯಾಗಿರುವುದರಿಂದ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕೆಂದು ಎಂದು ಹೇಳಿದರು.ಎಲ್ಲಾ ಇಲಾಖೆಗಳು ಕೂಡ ಯಾವುದೇ ಕಾಮಗಾರಿ ಕೈಗೊಂಡರೂ ಆ ಕಾಮಗಾರಿ ಜಿಪಿಎಸ್ ಫೋಟೋವನ್ನು ಕಡ್ಡಾಯವಾಗಿ ನಮೂದಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.