ಅಲ್ ಹಜರತ್ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಉರುಸ್‌

| Published : Jul 21 2025, 01:30 AM IST

ಅಲ್ ಹಜರತ್ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಉರುಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಲಗೂರು ಸಮೀಪದ ಅಂತರವಳ್ಳಿಯಲ್ಲಿ ಅಲ್ ಹಜರತ್ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಉರುಸ್‌ (ಗಂಧದ ಹಬ್ಬ) ಹಿಂದೂ-ಮುಸ್ಲಿಂ ಭಾವೈಕ್ಯತೆಯೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿತು.

ಹಲಗೂರು:

ಸಮೀಪದ ಅಂತರವಳ್ಳಿಯಲ್ಲಿ ಅಲ್ ಹಜರತ್ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಉರುಸ್‌ (ಗಂಧದ ಹಬ್ಬ) ಹಿಂದೂ-ಮುಸ್ಲಿಂ ಭಾವೈಕ್ಯತೆಯೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿತು.

ನೂರಾರು ಮುಸ್ಲಿಂ ಬಾಂಧವರು ಹುಲ್ಲಹಳ್ಳಿಯಿಂದ ತೆರೆದ ವಾಹನದಲ್ಲಿ ತಂದ ಗಂಧವನ್ನು ಅಂತರವಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೀಂ ಉಲ್ಲಾ ಮಸೀದಿಗೆ ತರಲಾಯಿತು.

ಗ್ರಾಮದ ಹೃದಯ ಭಾಗದಲ್ಲಿರುವ ವೀರಭದ್ರೇಶ್ವರಸ್ವಾಮಿ, ಉಪ್ಪರಿಗೆ ಬಸವೇಶ್ವರ ದೇವಾಲಯ ಮತ್ತು ಬಿಸಿಲಮ್ಮ ದೇವಾಸ್ಥನದ ನಡುವೆ ಕರಿಂ ಉಲ್ಲಾ ಶಾಖಾದ್ರಿ ಮಸೀದಿ ಇದ್ದು, ಹಿಂದೂ ದೇವಾಲಯಗಳಿಗೂ ದೀಪಾಲಂಕಾರ ಮಾಡಿ ಸಡಗರದಿಂದ ಗಂಧದ ಹಬ್ಬ ಆಚರಿಸಲಾಯಿತು.

ಗ್ರಾಮದ ಬಹುತೇಕ ಹಿಂದೂ ಧರ್ಮಿಯರು ಗಂಧದ ಹಬ್ಬದಂದು ಮಸೀದಿಗೆ ಆಗಮಿಸಿ ಕಲ್ಲು ಸಕ್ಕರೆ, ಉರಿಗಡಲೆ ಮತ್ತು ಕಡ್ಲೆ ಪುರಿಯನ್ನು ಮಸೀದಿಗೆ ಅರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ರಾಮನಗರ ಮೂಲದ ಮುಸ್ಲಿಂ ಗುರುಗಳು ದೇವರ ಕವಾಲಿಗಳನ್ನು ಹಾಡಿ ಭಕ್ತಿ ಮೆರೆದರು. ಗ್ರಾಮದ ನೂರಾರು ಭಕ್ತಾದಿಗಳಿಗೆ ಮಸೀದಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಹಲಗೂರು, ಧನಗೂರು, ನಿಟ್ಟೂರು, ಹುಲ್ಲಹಳ್ಳಿ, ಹುಸ್ಕೂರು ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಮುಸ್ಲಿಂ ಭಕ್ತಾದಿಗಳು ಗಂಧದ ಹಬ್ಬದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಶ್ರೀಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ಪೂಜಾ ಮಹೋತ್ಸವ

ಮಂಡ್ಯ:

ರೈಲು ನಿಲ್ದಾಣದ ಬಳಿ ಭಾನುವಾರ ಶ್ರೀಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ಪೂಜಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.

ಶ್ರೀಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯದಲ್ಲಿ ಆಡಿಗದ್ದಿಗೆ ಪೂಜಾ ಎಂದು ಕರೆಯಲಾಗುವ ಆಷಾಢ ಮಾಸದ ಕೃಷ್ಣ ಪಕ್ಷ, ಕೃತ್ತಿಕಾ ನಕ್ಷತ್ರದ ಅಂಗವಾಗಿ ಒಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್‍ಯಕ್ರಮಗಳು ನಡೆಸಲಾಗಿದೆ. ಸ್ಕಂದ ಹೋಮ, ಫಲಪಂಚಾಮೃತ ಅಭಿಷೇಕ ಮಾಡಲಾಯಿತು.

ಸ್ವಾಮಿಗೆ ಬೆಳ್ಳಿಯ ಕವಚಧಾರಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ಮಹಾಗಣಪತಿ ಹೋಮ, ದುರ್ಗಾ ಹೋಮ ಮತ್ತು ಶ್ರೀಅಮ್ಮನವರಿಗೆ ಫಲಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆಸಲಾಯಿತು.

ಸುದರ್ಶನ ಹೋಮ, ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು. ಬೆಳಗಿನಿಂದಲೇ ದೇವಾಲಯಕ್ಕೆ ಸಹಸ್ರಾರು ಮಂದಿ ಭಕ್ತಾದಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಬೆಳಗಿನಿಂದ ಸಂಜೆಯವರೆಗೂ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಆಡಿಗದ್ದಿಗೆ ಪೂಜೆ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಮರಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಶಂಕರ್, ಕಾರ್‍ಯದರ್ಶಿ ಕಣಿವೇಲು, ಸಹ ಕಾರ್‍ಯದರ್ಶಿ ಕುಪ್ಪರಾಜು, ಉಪಾಧ್ಯಕ್ಷ ನಾರಾಯಣ, ಟ್ರಸ್ಟಿಗಳಾದ ರಘು, ರಾಜು, ಅರ್ಚಕರಾದ ಶಶಿಕುಮಾರ್, ಮಂಜುನಾಥ ಉಡುಪ ಇತರರು ಪೂಜೆ ಸಲ್ಲಿಸಿದರು.