ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಸ್ತುತ ಸನ್ನಿವೇಶದಲ್ಲಿ ನೀಟ್, ಜೆಇಇ ಕುರಿತು ತರಬೇತಿ ನೀಡುವಾಗ ಎಐ ಬಳಕೆ ಮಾಡಿಕೊಂಡಲ್ಲಿ ಕಲಿಕೆಯ ವೇಗ ಹೆಚ್ಚಾಗುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯ ಕಡಿಮೆ ಸಮಯದಲ್ಲಿ ತಲುಪಿಸುವುದಕ್ಕೆ ಸಾಧ್ಯವಾಗಲಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಭುವನ ಕೌಲಗಿ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಬೋಧನೆಯಲ್ಲಿ ಎಐ ಬಳಕೆಯ ಕುರಿತು ಉಪನ್ಯಾಸಕರಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆನ್‌ಲೈನ್ ಪರೀಕ್ಷೆಗಳನ್ನು ಎದುರಿಸುವ ಸವಾಲು ಎದುರಾಗಲಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುವ ರೀತಿಯಲ್ಲಿ ಪರಿಣಾಮಕಾರಿ ಬೋಧನೆ ಮಾಡಿದಲ್ಲಿ ಯಾವ ಮಗುವು ಸಹ ಎಂಥ ಪರೀಕ್ಷೆಯಲ್ಲಿಯೂ ಹಿಂಬೀಳುವುದಿಲ್ಲ. ಹಾಗಾಗಿ ನಮ್ಮ ಉಪನ್ಯಾಸಕರಿಗೆ ಹಮ್ಮಿಕೊಂಡಿರುವ ಈ ಕೃತಕ ಬುದ್ಧಿಮತ್ತೆಯ ತರಬೇತಿ ಕಾರ್ಯಾಗಾರವು ಅತ್ಯಂತ ಉಪಯುಕ್ತವಾಗುತ್ತದೆ ಎಂದರು.ಪ್ರಪಂಚವೂ ನಿತ್ಯವೂ ಪರಿವರ್ತನೆ ಹೊಂದುತ್ತಿದೆ. ಅದಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿವೆ. ಅದಕ್ಕೆ ತಕ್ಕಂತೆ ನಾವೂ ಕೂಡ ಬದಲಾಗುತ್ತಲೇ ಸಾಗಬೇಕು. ಬೋಧನಾ ಕ್ಷೇತ್ರದ ಮೇಲೆ ಗುರುತರವಾದ ಜವಾಬ್ದಾರಿ ಇರುವುದರಿಂದ ಉಪನ್ಯಾಸಕರು ಮೊದಲು ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಲಿತುಕೊಂಡಿರಬೇಕು ಎಂದು ತಿಳಿಸಿದರು.ಬೆಂಗಳೂರಿನ ಎಐ ತರಬೇತುದಾರ ಆದಿತ್ಯಾ ಮಾಲೂರ ಮಾತನಾಡಿ, ಕೃತಕ ಬುದ್ಧಿಮತ್ತೆ ಎಂಬುವುದು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೇ ಅದು ಮನುಕುಲಕ್ಕೆ ಸಿಕ್ಕ ವರವಾಗುತ್ತದೆ. ಉಪನ್ಯಾಸಕರು ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗುವ ಹಾದಿಗೆ ಕರೆದುಕೊಂಡು ಹೋಗುವಾಗ ಎಐ ನೆರವಿಗೆ ಬರುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಗಣಿತದಂತಹ ವಿಷಯಗಳನ್ನು ಬೋಧಿಸುವ ಸಂದರ್ಭದಲ್ಲಿ ಬಳಸಿಕೊಳ್ಳುವ ಎಐ ಟೂಲ್‌ಗಳು ನಮ್ಮ ಬೋಧನೆಯನ್ನು ಮತ್ತಷ್ಟು ಚುರುಕುಗೊಳಿಸುತ್ತವೆ. ಮಕ್ಕಳ ಗಮನವನ್ನು ಕೇಂದ್ರೀಕರಿಸುವುದರೊಂದಿಗೆ ಹೆಚ್ಚಿನ ಅಂಕಗಳನ್ನು ಪಡೆಯಲು ನೆರವಾಗುತ್ತದೆ. ಹಾಗಾಗಿ ಇಂದು ಎಕ್ಸಲಂಟ್ ಕಾಲೇಜಿನ ಉಪನ್ಯಾಸಕರಿಗೆ ತರಬೇತಿ ನೀಡುತ್ತಿದ್ದು, ಮಕ್ಕಳು ಮುಂದಿನ ದಿನಗಳಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಾಗಾರದಲ್ಲಿ ಪ್ರಾಂಶುಪಾಲ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಎಲ್ಲ ಉಪನ್ಯಾಸಕರು ಭಾಗವಹಿಸಿದ್ದರು.ಕಲಿಕೆಯಲ್ಲಿ ಕೇವಲ ಜ್ಞಾನ ಹೊಂದಿದರೇ ಸಾಲದು ಅದಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಳ್ಳುವ ಕೌಶಲ್ಯ ಹೊಂದಿರಬೇಕು. ಅದರಲ್ಲೂ ಪ್ರಸ್ತುತ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಸಮರ್ಪಕ ಬಳಕೆ ಅರಿತುಕೊಂಡಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಪರಿಣಾಮಕಾರಿಯಾಗಿ ಕಲಿಸುವುದಕ್ಕೆ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ.
-ಭುವನ ಕೌಲಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು.