ಸಾರಾಂಶ
ಬಡವರ ಆಹಾರವಾಗಿರುವಂತಹ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರ ಆಗಿದೆ. ಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಇಂದು ಅದನ್ನು ನಾವು ಕೈಬಿಟ್ಟಿದ್ದೇವೆ. ಇಂದು ಸೂಪರ್ ಫುಡ್ ಗಳ ಪಟ್ಟಿಯಲ್ಲಿ ಸಿರಿಧಾನ್ಯಗಳು ಸೇರುತ್ತಿವೆ. ಸಿರಿಧಾನ್ಯ ಬೆಳೆಯಲು ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ ಬಾಗೇಪಲ್ಲಿ
ಸಿರಿಧಾನ್ಯಗಳಲ್ಲಿ ವಿಟಮಿನ್ ಗಳು, ಪ್ರೋಟೀನ್ ಗಳು ಸೇರಿದಂತೆ ಹೇರಳವಾದ ಪೌಷ್ಟಿಕಾಂಶಗಳಿರುವುದರಿಂದ, ಉತ್ತಮ ಸಮತೋಲನ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡುವಂತೆ ಡಾ.ಎಂ.ಸಿ ಸುಧಾಕರ್ ಸಲಹೆ ನೀಡಿದರು.ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಬಾಗೇಪಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ
ಬಡವರ ಆಹಾರವಾಗಿರುವಂತಹ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರ ಆಗಿದೆ. ಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಇಂದು ಅದನ್ನು ನಾವು ಕೈಬಿಟ್ಟಿದ್ದೇವೆ. ಇಂದು ಸೂಪರ್ ಫುಡ್ ಗಳ ಪಟ್ಟಿಯಲ್ಲಿ ಸಿರಿಧಾನ್ಯಗಳು ಸೇರುತ್ತಿವೆ. ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರ ಸಿರಿಧಾನ್ಯಗಳ ಕೃಷಿಗೆ ಉತ್ತೇಜನ ನೀಡಿ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.ಮನುಷ್ಯನ ಸುಸ್ಥಿರ ಆರೋಗ್ಯ ಕಾಪಾಡಲು ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲೆ, ಊದಲು, ಸಜ್ಜೆ ಮತ್ತು ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಠಿಕಾಂಶಗಳು ಸಹಕಾರಿಯಾಗಿವೆ. ಫೈಬರ್ ಯುಕ್ತ ಅಂಶಗಳು, ಹೆಚ್ಚಿನ ಕ್ಯಾಲ್ಸಿಯಂ ಮತ್ತು ಆರೋಗ್ಯಯುಕ್ತ ಇತರ ಖನಿಜಾಂಶಗಳಿವೆ. ಮುಖ್ಯವಾಗಿ ಸಿರಿಧಾನ್ಯಗಳನ್ನು ಕಡಿಮೆ ನೀರಿನಲ್ಲಿ, ಕಡಿಮೆ ಫಲವತ್ತತೆ ಇರುವ ಪ್ರದೇಶಗಳಲ್ಲಿಯೂ ಬೆಳೆಯಬಹುದಾಗಿದೆ ಎಂದು ತಿಳಿಸಿದರು.ಕೈಗಾರಿಕೆಗೆ 600 ಎಕರೆ ಮೀಸಲು
ಬಾಗೇಪಲ್ಲಿ ಸುತ್ತ ಮುತ್ತಲಿನ ಬರಡು ಭೂಮಿಯನ್ನು ಕೈಗಾರಿಕಾ ಪ್ರದೇಶದ ಸ್ಥಾಪನೆಯ ಉದ್ದೇಶಕ್ಕೆ 600 ಎಕರೆ ಮೀಸಲಿಡಲು ಅಂತಿಮ ಅಧಿಸೂಚನೆಯಾಗಿದೆ. ರೈತರಿಗೆ ಒಳ್ಳೆಯ ಭೂ ಸ್ವಾಧೀನ ಪರಿಹಾರವನ್ನು ಕೊಡಿಸಲು ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಪ್ರಯತ್ನ ಮಾಡುತ್ತಿದ್ದಾರೆ. ವ್ಯವಸಾಯ ಪದ್ಧತಿಯು ಬೆಳೆಯಬೇಕು ರೈತರು ಬದುಕಬೇಕು ಅದರ ಜೊತೆಗೆ ಆ ರೈತರ ಮಕ್ಕಳು ಹಾಗೂ ವಿದ್ಯಾವಂತರಿಗೆ ಉದ್ಯೋಗಗಳು ಸಿಗಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಯೋಜನೆ ಮಾಡುತ್ತಿದೆ ಎಂದರು.ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಸಿರಿಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳುಬೇನೆ ಹಾಗೂ ಕ್ಯಾನ್ಸರ್ ನಂತಹ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ. ಹಲವಾರು ಸತ್ವಗಳು ಹೇರಳವಾಗಿರುವ ಈ ಸಿರಿಧಾನ್ಯಗಳನ್ನು ಎಲ್ಲಾ ವಯಸ್ಸಿವನರು ಸೇವಿಸಿ ಇದರ ಉಪಯೋಗವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮತ್ತೆ ನಮ್ಮ ಆಹಾರದಲ್ಲಿ ಸಿರಿಧಾನ್ಯ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ ಎಂದರು.ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ರಾಶಿಗಳನ್ನು ಪ್ರದರ್ಶನ ಮಾಡಲಾಯಿತು. ವಿವಿಧ ಕೃಷಿ ಮತ್ತು ತೋಟಗಾರಿಕೆ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಫಲಪುಷ್ಪ ಪ್ರದರ್ಶನಗಳ ಆಯೋಜನೆಯು ಸಾರ್ವಜನಿಕರ ಗಮನ ಸೆಳೆಯಿತು.ಈ ಸಂಧರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್, ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಮ್ಮ ನರಸಿಂಹ ನಾಯ್ಡು, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಕೃಷಿ ಇಲಾಖೆಯ ಕೃಷಿ ಜಂಟಿ ನಿರ್ದೇಶಕಿ ಜಾವೀದಾ ನಾಸಿಮ್ ಖಾನಂ, ತೋಟಗಾರಿಕೆ ಉಪ ನಿರ್ದೇಶಕಿ ಎಂ.ಗಾಯತ್ರಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಂಪಲ್ಲಿ ಚೌಡರೆಡ್ಡಿ, ತಾಪಂ ಇಒ ಜಿ.ವಿ ರಮೇಶ್, ವಕೀಲ ಸಂಘದ ಅಧ್ಯಕ್ಷ ಎ.ನಂಜುಂಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಾರ್ವಜನಿಕರು ಇದ್ದರು.