ಸಾರಾಂಶ
ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕ ಮಂಜುನಾಥ್ ಹೇಳಿದರು.
ನಗರದ ಬಿಎಚ್ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳು ಶಿಕ್ಷಣವನ್ನು ಮಾತ್ರವಲ್ಲದೆ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಯೂನಿಫಾರ್ಮ್, ಶೂ, ಸಾಕ್ಸ್ ಒಳಗೊಂಡಂತೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಪೂರೈಸುತ್ತಿದೆ. ಪಿ.ಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಬಿಸಿ ಊಟ, ಕೆನೆಭರಿತ ಹಾಲು, ರಾಗಿ ಮಾಲ್ಟ್, ಪೌಷ್ಟಿಕತೆಗೆ ಪೂರಕವಾದ ಮೊಟ್ಟೆ ಹಾಗೂ ಬಾಳೆಹಣ್ಣನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದಲ್ಲದೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಆರೋಗ್ಯದ ಹಿತದೃಷ್ಟಿಯಿಂದ ದೇಹದಲ್ಲಿ ಉಂಟಾಗುವಂತಹ ರಕ್ತಹೀನತೆಯನ್ನು ಹೋಗಲಾಡಿಸಲು ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಈ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಗಾಗಿ ಶ್ರಮಿಸಲು ಸಹಕಾರ ನೀಡಿ ಎಂದು ಕೋರಿದರು.ಕ್ಷೇತ್ರ ಸಮನ್ವಯ ಅಧಿಕಾರಿ ಶಿವಪ್ಪ ಸಂಗಣ್ಣನವರ್ ಮಾತನಾಡಿ, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ತೆರೆಯಲಾಗುತ್ತಿದೆ. ಹಾಗಾಗಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಚ್.ಮೋಹನೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶವುಳ್ಳ ಮೊಟ್ಟೆ, ಬಾಳೆಹಣ್ಣು, ಕೆನೆಭರಿತ ಹಾಲು ಹಾಗೂ ರಾಗಿ ಮಾಲ್ಟು ಸರ್ಕಾರ ಒದಗಿಸುತ್ತಿದೆ. ಮಕ್ಕಳು ಅದರ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು.ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಜೇಶ್ ಯೋಜನೆಯ ಪೂರಕವಾದ ಪೌಷ್ಟಿಕ ಆಹಾರದ ಕುರಿತು ಪಿಪಿಟಿ ಪ್ರೆಸೆಂಟೇಷನ್ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿಯ ಜಿಲ್ಲಾ ಉಪಾಧ್ಯಕ್ಷ ಸತೀಶ್, ಬೆಂಗಳೂರು ವಿಭಾಗದ ಎಪಿಎಫ್ ಕೋ-ಆರ್ಡಿನೇಟರ್ ಪ್ರಭಾನಂದ ಹೆಗಡೆ, ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯ ದಾದಾಪೀರ್, ಶಿಕ್ಷಣ ಸಂಯೋಜಕರಾದ ಶಶಿರೇಖಾ, ಹರೀಶ್, ಮೋಹನ್ ಹಾಗೂ ಬಿಆರ್‌ಪಿ ಧನಂಜಯ್, ಎಲ್ಲಾ ಕ್ಲಸ್ಟರ್ ಸಿಆರ್‌ಪಿಗಳು, ನಗರ ಭಾಗದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು, ಪದಾಧಿಕಾರಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕರು ಉಪಸ್ಥಿತರಿದ್ದರು.