ಸಾರಾಂಶ
ರಾಣಿಬೆನ್ನೂರು: ರೈತರು ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಹಾಗೂ ಇನ್ನಿತರ ರಸ ಹೀರುವ ಕೀಟಗಳ ನಿರ್ವಹಣೆಯನ್ನು ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಹತೋಟಿ ಮಾಡಿದರೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮುಂಬೈನ ಯುಪಿಎಲ್, ಎಸ್ಎಎಸ್, ಲಿ. ಹಾಗೂ ಸವಣೂರು ಕೃಷಿ ಇಲಾಖೆ ಸಹಯೋಗದಲ್ಲಿ ಸವಣೂರು ತಾಲೂಕಿನ ಸವಣೂರು ಗ್ರಾಮದ ಪ್ರಗತಿಪರ ರೈತರಾದ ಶಿವಲಿಂಗಪ್ಪ ಗಾಣಿಗೇರ, ರಾಜಣ್ಣ ನಾರಾಯಣಪುರ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆ ಹಾಗೂ ಸಂಯೋಗ ಬಾಧಕ ನೂತನ ತಂತ್ರಜ್ಞಾನದಿಂದ ಬಿ.ಟಿ. ಹತ್ತಿಯ ಗುಲಾಬಿ ವರ್ಣಕಾಯಿ ಕೊರಕದ ನಿರ್ವಹಣೆ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಸಾಯನಿಕ ಕೀಟನಾಶಕಗಳ ಬಗ್ಗೆ ಹೆಚ್ಚಿನ ಒಲವು ತೋರದೆ ಇಂತಹ ಸಾವಯವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೀಟಬಾಧೆ ನಿಯಂತ್ರಿಸಬೇಕು ಎಂದರು.ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್.ಎ. ಗದ್ದನಕೇರಿ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಕೃಷಿ ಉಪ ಕಸುಬುಗಳಾದ ಹೈನುಗಾರಿಕೆ, ರೇಷ್ಮೆ ಕೃಷಿ, ಜೇನು ಕೃಷಿ ಮತ್ತು ಆಹಾರ ಮೌಲ್ಯವರ್ಧನೆ ತಂತ್ರಜ್ಞಾನಗಳನ್ನು ಕೃಷಿಯೊಂದಿಗೆ ಅಳವಡಿಸಿಕೊಂಡರೆ ರೈತ ಮಹಿಳೆಯರ ಸಬಲೀಕರಣಕ್ಕೆ ಹಾಗೂ ಕುಟುಂಬ ಆದಾಯ ಹೆಚ್ಚಿಸಲು ಸಹಾಯವಾಗುತ್ತದೆ. ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದಿಂದ ದೊರೆಯುವ ಹೊಸ ತಂತ್ರಜ್ಞಾನಗಳ ಕುರಿತು ತರಬೇತಿ ಹಾಗೂ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಧಾರವಾಡ ಕೃಷಿ ಮಹಾವಿದ್ಯಾಲಯದ ಸಹ ಪ್ರಧಾನ ಸಂಶೋಧಕ ಹಾಗೂ ಪ್ರಾಧ್ಯಾಪಕ ಡಾ. ಎಸ್.ಎಸ್. ಉಡಕೇರಿ, ಹತ್ತಿ ಬೆಳೆಗೆ ಹಾವೇರಿ ಜಿಲ್ಲೆ ಹೆಸರುವಾಸಿಯಾಗಿದ್ದು, ಈ ಪ್ರದೇಶದಲ್ಲಿ ಕೀಟಬಾಧೆಯು ಲಕ್ಷಣಗಳು ಹೆಚ್ಚಾಗಿ ಕಂಡು ಬಂದಿದೆ. ಹತ್ತಿ ಬೆಳೆಯಲ್ಲಿ ವಿಶೇಷ ತಂತ್ರಜ್ಞಾನಗಳ ಬೆಳವಣಿಗೆ ಹಾಗೂ ಅವುಗಳ ಅಳವಡಿಕೆಯಿಂದ ಕೀಟಗಳಲ್ಲಿನ ನಿರೋಧಕ ಶಕ್ತಿ ತಡೆಯುವಿಕೆ ಹಾಗೂ ಹತೋಟಿ ಕ್ರಮಗಳಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.ಸಂಯೋಗ ಬಾಧಕ ನೂತನ ತಂತ್ರಜ್ಞಾನದಿಂದ ಬಿ.ಟಿ. ಹತ್ತಿಯ ಗುಲಾಬಿ ವರ್ಣಕಾಯಿ ಕೊರಕದ ನಿರ್ವಹಣೆ ಪ್ರಾತ್ಯಕ್ಷಿಕೆ ಕೈಗೊಂಡಿದ್ದು, ಸಂಯೋಗ ಬಾಧಕವು ಗಂಡು ಪತಂಗಗಳನ್ನು ಆಕರ್ಷಣೆ ಮಾಡಿ ಸಂತಾನೋತ್ಪತ್ತಿ ಕ್ರಿಯೆಗೆ ಅಡಚಣೆ ಮಾಡುತ್ತದೆ. ಇದರಿಂದ ಗುಲಾಬಿ ವರ್ಣ ಕಾಯಿಕೊರಕದ ಬಾಧೆ ನಿಯಂತ್ರಣವಾಗುತ್ತದೆ. ಈ ಸಂಯೋಗ ಬಾಧಕದ ಪ್ಯಾಕೇಟ್‌ನ್ನು 45ರಿಂದ 50 ದಿನದ ಬೆಳೆಗೆ (ಎಳೆ ಟೊಂಗೆ) ಹಾಕಬೇಕು. ಇದರಿಂದ ರೈತರು ಹೆಚ್ಚಿನ ಗುಣಮಟ್ಟದ ಹತ್ತಿ ಹಾಗೂ ಅಧಿಕ ಇಳುವರಿ ಪಡೆಯಬಹುದು. ಇದೊಂದು ಪರಿಸರಸ್ನೇಹಿ ಹಾಗೂ ಸುಲಭ ತಾಂತ್ರಿಕತೆಯಾಗಿದೆ ಎಂದರು. ಮುಂಬೈನ ಯುಪಿಎಲ್, ಎಸ್ಎಎಸ್ ಲಿ.ನ ಡಾ. ಗೌರವ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಗತಿಪರ ರೈತರಾದ ಶಿವಲಿಂಗಪ್ಪ ಗಾಣಿಗೇರ, ರಾಜಣ್ಣ ನಾರಾಯಣಪುರ, ಸದಾನಂದ ಗುಡಗೇರ ಅವರನ್ನು ಸನ್ಮಾನಿಸಲಾಯಿತು.ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ, ಸವಣೂರು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಿಜಯಕುಮಾರ ಕುಂಕೂರ, ಡಾ. ಪ್ರಸನ್ನ ಪಿ.ಎಂ., ಡಾ. ಭರಮರಾಜ ಬಡಿಗೇರ, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರೋತ್ಸವದಲ್ಲಿ ಸವಣೂರು ತಾಲೂಕಿನ 95ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.