ತಿರುಪತಿ ಪ್ರಸಾದಕ್ಕೆ ದನದ ಕೊಬ್ಬು ಬಳಕೆ: ಸಿಬಿಐ ತನಿಖೆಗೆ ಕೆ.ಎಸ್‌.ಈಶ್ವರಪ್ಪ ಆಗ್ರಹ

| Published : Sep 21 2024, 01:49 AM IST

ತಿರುಪತಿ ಪ್ರಸಾದಕ್ಕೆ ದನದ ಕೊಬ್ಬು ಬಳಕೆ: ಸಿಬಿಐ ತನಿಖೆಗೆ ಕೆ.ಎಸ್‌.ಈಶ್ವರಪ್ಪ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ಲಡ್ಡು ಕೇವಲ ಪ್ರಸಾದವಲ್ಲ, ಅದು ಭಕ್ತಿಯ ಒಂದು ರೂಪ. ಈಗ ಆಗಿರುವ ಘಟನೆಯಿಂದ ವಿಶ್ವದಲ್ಲಿರುವ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವಂತಹ ವಿಷಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಿರುಪತಿಯ ಪ್ರಸಾದವಾದ ಲಡ್ಡುವಿಗೆ ಹಸುವಿನ ಕೊಬ್ಬು, ಮೀನು ಎಣ್ಣೆ ಸೇರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕಲ್ಲದೆ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿರುಪತಿ ಲಡ್ಡು ಕೇವಲ ಪ್ರಸಾದವಲ್ಲ, ಅದು ಭಕ್ತಿಯ ಒಂದು ರೂಪ. ಈಗ ಆಗಿರುವ ಘಟನೆಯಿಂದ ವಿಶ್ವದಲ್ಲಿರುವ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವಂತಹ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌. ಆರ್‌.ಪಾರ್ಟಿಯ ಜಗನ್‌ ಮೋಹನ್‌ ರೆಡ್ಡಿಯವರು ಮತಾಂತರಗೊಂಡ ಕ್ರೈಸ್ತರಾಗಿದ್ದರು. ಇವರ ಆಡಳಿತ ಅವಧಿಯಲ್ಲಿ ತಿರುಪತಿ ಲಡ್ಡುವಿಗೆ ಹಿಂದೂಗಳ ಗೋಮಾತೆಯಾದ ಹಸುವಿನ ಕೊಬ್ಬು, ಮೀನಿನ ಎಣ್ಣೆ ಸೇರಿಸಿದ್ದಾರೆ ಎಂಬುದು ಹಿಂದೂಗಳ ಭಾವನೆಗೆ ನೋವುಂಟು ಮಾಡುವ ಸಂಗತಿ ಎಂದರು.

ತಿರುಪತಿ ಪ್ರಸಾದಕ್ಕೆ ಕೊಬ್ಬು ಸೇರಿಸುವಂತಹ ರಾಕ್ಷಸಿ ಪ್ರವೃತ್ತಿಗೆ ಯಾರೂ ಕೂಡ ಇಳಿಯಬಾರದಾಗಿತ್ತು. ಜಗನ್‌ಮೋಹನ್ ರೆಡ್ಡಿ ಸಹ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಖೇದಕರ ಸಂಗತಿ. ಕೂಡಲೇ ಅವರು ಹಿಂದೂ ಸಮಾಜದ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದರು.

ಕೃತ್ಯದಲ್ಲಿ ಯಾವ ಯಾವ ಕ್ರೈಸ್ತ ಮಿಷನರಿಗಳು ಕೆಲಸ ಮಾಡಿವೆ ಎಂಬುದನ್ನು ಹೊರ ತರಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಅತ್ಯಂತ ಸೂಕ್ತ ವಾಗಿದೆ ಎಂದರು.

ಮೃದು ಧೋರಣೆ:

ರಾಜ್ಯದಲ್ಲಿ ರಾಷ್ಟ್ರದ್ರೋಹಿ ಘಟನೆಗಳು ಹೆಚ್ಚಾಗುತ್ತಿವೆ. ಟಿಪ್ಪು ಸುಲ್ತಾನ್, ಔರಂಗಜೇಬ್ ಅಂತಹವರ ವಿಷಯ ರಾರಾಜಿಸುತ್ತಿವೆ. ಖಡ್ಗ, ತಲವಾರ್, ಪೆಟ್ರೋಲ್ ಬಾಂಬ್ ಗಳು ತೂರಲ್ಪಡುತ್ತಿವೆ. ರಾಜ್ಯ ಸರ್ಕಾರ ಮುಸಲ್ಮಾನರನ್ನು ಓಲೈಸುವುದಕ್ಕಾಗಿ ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿದೆ. ಇಂಥ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಶಿಕ್ಷೆಯನ್ನು ಕೈಗೊಳ್ಳದೆ ಮೃದು ಧೋರಣೆ ತಾಳಲಾಗುತ್ತಿದೆ ಎಂದು ದೂರಿದರು.

ಸರ್ಕಾರದ ನಿಲುವನ್ನು ಖಂಡಿಸಿ ಹಿಂದೂ ಸಮಾಜ ಧಂಗೆ ಇದ್ದರೆ ಪರಿಸ್ಥಿತಿ ಏನಾಗಬಾರದು ಎಂಬುದನ್ನು ಸರ್ಕಾರ ಯೋಚಿಸಬೇಕು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮಾಜಿ ನಗರಸಭೆಯ ಅಧ್ಯಕ್ಷ ಎಂ. ಶಂಕರ್‌, ಬಾಲು, ಶಿವಾಜಿ, ದಿನೇಶ್ ಮತ್ತಿತರರು ಇದ್ದರು.ಚಂದ್ರಶೇಖರನ್‌ ಕುಟುಂಬಕ್ಕೆ ಪರಿಹಾರ: ಈಶ್ವರಪ್ಪ ಸಂತಸ

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಕುಟುಂಬಕ್ಕೆ 25 ಲಕ್ಷ ರು ಪರಿಹಾರ ಕೊಡಬೇಕೆಂಬ ನಮ್ಮ ಒತ್ತಾಯ ಇದೀಗ ಫಲ ಕೊಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚಂದ್ರಶೇಖರ್ ಪತ್ನಿಗೆ ನಿನ್ನೆ ಸರ್ಕಾರದ ವತಿಯಿಂದ ಕರೆ ಬಂದಿದ್ದು, ಬಾಂಡ್ ಪೇಪರ್ ತೆಗೆದುಕೊಂಡು ಬನ್ನಿ, ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದ ಕಡೆಯಿಂದ ಸಂಬಂಧಿಸಿದವರು ಹೇಳಿದ್ದಾರೆ. ಅಲ್ಲದೆ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಕೊಡುವ ವಿಚಾರದಲ್ಲಿಯೂ ಕೂಡ ಭರವಸೆ ನೀಡಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.