ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಅರಣ್ಯದಂಚಿನ ಗ್ರಾಮಗಳಲ್ಲಿ ಚಿರತೆ ಭೀತಿ ಎದುರಾಗಿದ್ದು, ರೇಡಿಯೋ ಕಾಲರ್ ಮೂಲಕ ಸೆರೆಹಿಡಿಯಲು ಥರ್ಮಲ್ ಡ್ರೋನ್ ಕ್ಯಾಮೆರಾ ಬಳಕೆ ಮೂಲಕ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.ತಾಲೂಕಿನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಗುಂಡಾಲ್ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಮೇಕೆ, ಕೋಳಿಗಳನ್ನು ತಿಂದು ಪರಾರಿಯಾಗಿದ್ದು, ಈ ಭಾಗದ ರೈತರು ಗ್ರಾಮಸ್ಥರು ಆತಂಕದ ನಡುವೆ ದಿನದೂಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಜೂ.5 ರಿಂದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ವಾಸು ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಕಾರ್ಯಪಡೆ ಚಲನವಲನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯುವ ಮೂಲಕ ಗುರುವಾರ ಗುಂಡಾಲ್ ಜಲಾಶಯದ ಸುತ್ತಮುತ್ತ ಸೋಲಾರ್ ಪ್ಲಾಂಟ್ ನಲ್ಲಿ ಕಂಡುಬಂದಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸಿದ್ದಾರೆ.
ಡ್ರೋನ್ ಕ್ಯಾಮೆರಾ ಬಳಕೆ: ಚಿರತೆ ಕಾರ್ಯಪಡೆ ಕಳೆದ 3 ದಿನಗಳಿಂದ ಗುಂಡಾಲ್ ಜಲಾಶಯ ಸುತ್ತಮುತ್ತ ಚಿರತೆ ಚಲನವಲವನ್ನು ಪತ್ತೆ ಹಚ್ಚುವ ಮೂಲಕ ಸೆರೆಹಿಡಿಯಲು ಈ ಭಾಗದಲ್ಲಿ ಬೋನ್ ಸಹ ಇಡಲಾಗಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮೊದಲ ಬಾರಿಗೆ ಥರ್ಮಲ್ ಡ್ರೋನ್ ಕ್ಯಾಮರಾ ಬಳಕೆ ಮಾಡುವ ಮೂಲಕ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.ಹೆಚ್ಚಿದ ಮಾನವ ಪ್ರಾಣಿ ಸಂಘರ್ಷ: ಕಳೆದ ಒಂದು ತಿಂಗಳಿನಿಂದ ಗುಂಡಾಲ್ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳಿಗೆ ಬಿಆರ್‌ಟಿ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆ ರೈತರ ಜಮೀನುಗಳಲ್ಲಿ ಹಗಲು ರಾತ್ರಿ ಎನ್ನದೆ ಬರುತ್ತಿರುವ ಚಿರತೆ ಸಾಕು ಪ್ರಾಣಿಗಳಾದ ಮೇಕೆ ಮತ್ತು ಕೋಳಿಗಳನ್ನು ತಿಂದು ಇಲ್ಲಿನ ರೈತರ ಹಾಗೂ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಅರಣ್ಯದ ಜಮೀನುಗಳಲ್ಲಿ ರೈತರು ಹಾಗೂ ಕಾಡುಪ್ರಾಣಿಗಳು ಸಂಘರ್ಷ ಎಡೆ ಮಾಡಿಕೊಟ್ಟಿದೆ ಹೀಗಾಗಿ ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಭಯಭೀತರಾಗಿದ್ದು ಆತಂಕ ಉಂಟು ಮಾಡಿರುವ ಚಿರತೆಯಿಂದ ಪ್ರಾಣ ಹಾನಿ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಹಿಡಿದು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.
ಸತತವಾಗಿ 9 ದಿನಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಸಹಕಾರ ನೀಡಬೇಕು. ಒಬ್ಬೊಬ್ಬರೇ ಜಮೀನಿನಲ್ಲಿ ಓಡಾಡಬಾರದು. ಸಾಕು ಪ್ರಾಣಿಗಳನ್ನು ತಿಂದಿರುವ ಚಿರತೆ ಸೆರೆ ಹಿಡಿಯುವವರೆಗೆ ಮಕ್ಕಳು, ವಯಸ್ಸಾದವರು, ಜನಜಾನುವಾರು ಬಗ್ಗೆ ಎಚ್ಚರಿಕೆಯಿಂದ ಇರಬೇಕು.-ವಾಸು, ವಲಯ ಅರಣ್ಯಾಧಿಕಾರಿ, ಬಿಆರ್‌ಟಿ