ಮೂಲ್ಕಿ ಬಸ್‌ ನಿಲ್ದಾಣ: ದಾಹ ತೀರಿಸದ ಕುಡಿಯುವ ನೀರು ಘಟಕ!

| Published : May 02 2024, 12:20 AM IST

ಮೂಲ್ಕಿ ಬಸ್‌ ನಿಲ್ದಾಣ: ದಾಹ ತೀರಿಸದ ಕುಡಿಯುವ ನೀರು ಘಟಕ!
Share this Article
  • FB
  • TW
  • Linkdin
  • Email

ಸಾರಾಂಶ

ಯೋಜನೆಯ ನಿರ್ವಹಣೆಯು ಸರಿಯಾಗಿ ನಡೆಯದಿರುವುದರಿಂದ ಹಾಗೂ ನೀರಿನ ಟ್ಯಾಂಕ್‌ಗೆ ನೀರು ಸರಬರಾಜು ಇಲ್ಲದ ಕಾರಣ ಪ್ರಯಾಣಿಕರು ಕುಡಿಯುವ ನೀರಿಗಾಗಿ ಅಲೆದಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ.

ಪ್ರಕಾಶ್‌ ಎಂ.ಸುವರ್ಣ

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಬಸ್‌ ನಿಲ್ದಾಣದಲ್ಲಿ ಲಯನ್ಸ್‌ ಸಂಸ್ಥೆ ವತಿಯಿಂದ ಪಣಂಬೂರಿನ ಕುದುರೆಮುಖ ಐರನ್‌ ಆ್ಯಂಡ್‌ ಆಯಿಲ್‌ ಕಂಪೆನಿ (ಕೆ ಐಒಸಿಎಲ್‌) ಪ್ರಾಯೋಜಕತ್ವದಲ್ಲಿ ಕೆಲವು ವರ್ಷಗಳ ಹಿಂದೆ ಸಾರ್ವಜನಿಕರಿಗೆ ನಿರ್ಮಿಸಿ ಕೊಟ್ಟ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯು ಉಪಯೋಗಕ್ಕಿಲ್ಲದಂತಾಗಿದೆ.

ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಕ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ. ಯೋಜನೆಯ ನಿರ್ವಹಣೆಯು ಸರಿಯಾಗಿ ನಡೆಯದಿರುವುದರಿಂದ ಹಾಗೂ ನೀರಿನ ಟ್ಯಾಂಕ್‌ಗೆ ನೀರು ಸರಬರಾಜು ಇಲ್ಲದ ಕಾರಣ ಪ್ರಯಾಣಿಕರು ಕುಡಿಯುವ ನೀರಿಗಾಗಿ ಅಲೆದಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ.

ಕುಡಿಯುವ ನೀರಿನ ಯೋಜನೆಯಲ್ಲಿ ನಿರ್ವಹಣೆ ಮೂಲ್ಕಿ ನಗರ ಪಂಚಾಯಿತಿ ಎಂದು ನಮೂದಿಸಲಾಗಿದ್ದು, ಆದರೆ ಯಾವುದೇ ವ್ಯವಸ್ಥೆ ನಡೆದಿಲ್ಲ. ಕೂಡಲೇ ನಗರ ಪಂಚಾಯಿತಿ ಮುಖ್ಯಾಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮೂಲ್ಕಿ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕುದುರೆಮುಖ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು, ನಿರ್ವಹಣೆ ಮೂಲ್ಕಿ ನಗರ ಪಂಚಾಯಿತಿಗೆ ವಹಿಸಲಾಗಿತ್ತು. ಆದರೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಲಯನ್ಸ್ ಕ್ಲಬ್‌ ಮೂಲಕ ನಿರ್ವಹಣೆಯ ಬಗ್ಗೆ ಚರ್ಚಿಸಿ ಸರಿಪಡಿಸಲು ಪ್ರಯತ್ನಿಸಲಾಗುವುದು.

। ಶೀತಲ್‌ ಸುಶೀಲ್‌, ಅಧ್ಯಕ್ಷ, ಲಯನ್ಸ್‌ ಕ್ಲಬ್‌ ಮೂಲ್ಕಿ

----------ಮೂಲ್ಕಿ ನಗರ ಪಂಚಾಯಿತಿ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಲಾದ ಕುಡಿಯುವ ನೀರಿನ ಘಟಕವು ನೀರಿಲ್ಲದೆ ತುಕ್ಕು ಹಿಡಿದಿದೆ. ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿಲ್ಲ. ಬಸ್‌ ನಿಲ್ದಾಣದಲ್ಲಿ ರಸ್ತೆ ಅವ್ಯವಸ್ಥೆಯ ಜೊತೆಗೆ ಪ್ರಯಾಣಿಕರಿಗೆ ಕುಡಿಯುವ ನೀರಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಯನ್ಸ್‌ ಸಂಸ್ಥೆ ಅಥವಾ ನಗರ ಪಂಚಾಯಿತಿ ಕೂಡಲೇ ನೀರಿನ ಘಟಕವನ್ನು ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿ ಮಾಡಬೇಕು.

। ಅಬ್ದುಲ್‌ ರಜಾಕ್‌, ಸಮಾಜ ಸೇವಕ.