ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ ಇದುವರೆಗೂ ಸುಮಾರು 20 ಸಾವಿರ ಕೋಟಿ ಅನುದಾನ ತಂದು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.ಜಿಲ್ಲಾ ಪಂಚಾಯಿತ್ ನ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬಾಲ್ಯ ವಿವಾಹ ತಡೆಗಟ್ಟಲು ಸೂಚನೆ
ಜಿಲ್ಲೆಯಲ್ಲಿ 39 ಬಾಲ ಗರ್ಭಿಣಿಯರು, 84 ಬಾಲ್ಯ ವಿವಾಹ,3 3 ಗಾಂಜಾ ಮತ್ತು ಮಾದಕವಸ್ತು ಮತ್ತು 165 ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ. ಈ ಬಗ್ಗೆ ಇನ್ನು ಕಟ್ಟುನಿಟ್ಟಿನ ಕ್ರಮ ವಹಿಸಿ ಪ್ರಕರಣಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಗ್ರಾಮಾಂತರ ಪ್ರದೇಶಗಳ ಹಳ್ಳಿಗಳ ಕಡೆ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳು ಕಿರಾಣಿ ಅಂಗಡಿಗಳಂತೆ ತಲೆ ಎತ್ತುತ್ತಿವೆ. ಹಾಲು ಮರಾಟ ಮಾಡುವ ಕೇಂದ್ರಗಳಿಗಿಂತ ಅಕ್ರಮ ಮದ್ಯ ಮಾರಾಟ ಮಾಡುವ ಕೇಂದ್ರಗಳು ಹೆಚ್ಚಾಗುತ್ತಿವೆ. ಪರವಾನಗಿ ಪಡೆದ ಮದ್ಯ ಮಾರಾಟ ಮಳಿಗೆಗಳಲ್ಲಿ ನಿಯಮಾವಳಿ ರೀತ್ಯ ಮದ್ಯ ಮಾರಾಟ ಆಗಬೇಕು. ಕೂಡಲೇ ಪರವಾನಗಿ ಪಡೆದ ಮದ್ಯ ಮಾರಾಟ ಮಳಿಗೆಗಳ ವ್ಯವಹಾರಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.ಬರ ನಿರ್ವಹಣೆಗೆ ₹20 ಕೋಟಿಜಿಲ್ಲೆಯಲ್ಲಿ ಬರ ಎದುರಿಸಲು ಕುಡಿಯುವ ನೀರು, ಜಾನುವಾರು ಮೇವು ಪೂರೈಕೆ ಮಾಡಲು 20 ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಲಭ್ಯವಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದ 13 ಹಳ್ಳಿಗಳಲ್ಲಿ, ನಗರ ಪ್ರದೇಶದ 29 ವಾರ್ಡ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಜೊತೆಗೆ ಮುಂದೆ ಸಮಸ್ಯೆ ತಲೆದೋರಬಹುದಾದ ಗ್ರಾಮಗಳ ಮತ್ತು ವಾರ್ಡ್ ಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. 75,200 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ 463 ಕೋಟಿ ಪರಿಹಾರ ಹಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸೂಕ್ತ ಭದ್ರತಾ ಕ್ರಮಅಯೋಧ್ಯೆಯಲ್ಲಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ಜಿಲ್ಲೆಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ, ಉಪ ಕಾರ್ಯದರ್ಶಿ ಡಾ. ಎನ್.ಭಾಸ್ಕರ್, ಮುಖ್ಯ ಯೋಜನಾಧಿಕಾರಿ ಧನುರೇಣುಕ, ಯೋಜನಾ ನಿರ್ದೇಶಕ ಈಶ್ವರಪ್ಪ, ಸಮಿತಿ ಸದಸ್ಯರಾದ ಲಕ್ಷ್ಮೀ ನಾರಾಯಣಗುಪ್ತ, ಬಿ.ಎನ್. ರಂಗನಾಥ್, ಬಿ.ಎಸ್. ಶೋಭಾ, ರುಕ್ಮಿಣಿಯಮ್ಮ, ವೆಂಕಟೇಶ್, ಬಿ.ಎನ್. ಮುನಿಶಾಮಿ, ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಸಿಕೆಬಿ-3 ಚಿಕ್ಕಬಳ್ಳಾಪುರ ಜಿಪಂನ ಸರ್. ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ದಿಶಾ ಸಭೆಯನ್ನು ಸಂಸದ ಬಿ.ಎನ್.ಬಚ್ಚೇಗೌಡ ಉದ್ಘಾಟಿಸಿದರು.