ಸಾರಾಂಶ
ಇಲ್ಲಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ 10 ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸಲಾಗಿರುವ 35 ಅಡಿ ಎತ್ತರದ ಪರಶುರಾಮ ದೇವರ ವಿಗ್ರಹ ಕೊನೆಗೂ ನಕಲಿ ಎಂದು ಸಾಬೀತಾಗಿದ್ದು, ಇಬ್ಬರು ಅಧಿಕಾರಿಗಳ ಮೇಲೆ ಕಾರ್ಕಳ ತಾಲೂಕು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ಕಾರ್ಕಳ : ಇಲ್ಲಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ 10 ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸಲಾಗಿರುವ 35 ಅಡಿ ಎತ್ತರದ ಪರಶುರಾಮ ದೇವರ ವಿಗ್ರಹ ಕೊನೆಗೂ ನಕಲಿ ಎಂದು ಸಾಬೀತಾಗಿದ್ದು, ಈ ಬಗ್ಗೆ ಶಿಲ್ಪಿ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಇಬ್ಬರು ಅಧಿಕಾರಿಗಳ ಮೇಲೆ ಕಾರ್ಕಳ ತಾಲೂಕು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
2024ರಲ್ಲಿ ಕೃಷ್ಣ ಶೆಟ್ಟಿ ಎಂಬುವರು ನೀಡಿದ ದೂರಿನಂತೆ ಈ ಪ್ರಕರಣದ ತನಿಖೆ ನಡೆಯತ್ತಿದೆ. ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್ ನ ಶಿಲ್ಪಿ ಕೃಷ್ಣ ನಾಯ್ಕ್ ಅವರು ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡಿದ್ದರು. ಆದರೆ, ಅವರು ಕಂಚಿನ ಮೂರ್ತಿಯ ಬದಲಿಗೆ ಹಿತ್ತಾಳೆಯಿಂದ ವಿಗ್ರಹ ನಿರ್ಮಿಸಿದ್ದಾರೆ ಎಂದು ತನಿಖಾ ವರದಿಯಲ್ಲಿ ತಿಳಿದು ಬಂದಿದೆ.
ನಿರ್ಮಿತಿಯ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಎಂಜಿನಿಯರ್ ಸಚಿನ್ ವೈ.ಕುಮಾರ್ ಅವರು ವಿಗ್ರಹ ನಿರ್ಮಾಣದ ವರ್ಕ್ ಆರ್ಡರ್‌ನಲ್ಲಿದ್ದ ಷರತ್ತುಗಳನ್ನು ಪಾಲಿಸಿರಲಿಲ್ಲ. ವಿಗ್ರಹದ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಮಣಿಪಾಲದಲ್ಲಿರುವ ನಿರ್ಮಿತಿ ಕೇಂದ್ರದ ಶೆಡ್‌ನಲ್ಲಿ ಇರಿಸಿದ್ದರು. ಅದನ್ನು ದುರಸ್ತಿ ಮಾಡಲು ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಹಸ್ತಾಂತರ ಮಾಡಿದ್ದಾಗಿ, ತಪ್ಪು ಮಾಹಿತಿ ನೀಡಿದ್ದರು ಎಂದು ದೂರಲಾಗಿತ್ತು.
ಇದೀಗ ಕಾರ್ಕಳ ಪೊಲೀಸರು ಶಿಲ್ಪಿ ಕೃಷ್ಣ ನಾಯ್ಕ, ನಿರ್ಮಿತಿ ಕೇಂದ್ರದ ಅರುಣ ಕುಮಾರ್ ಹಾಗೂ ಸಚಿನ್ ವೈ.ಕುಮಾರ್ ಅವರು ಒಳಸಂಚು, ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿನಾಶ ಮಾಡಿದ್ದಾರೆ ಎಂದು ಅವರ ವಿರುದ್ದ ಕಾರ್ಕಳ ತಾಲೂಕು ನ್ಯಾಯಾಲಯಕ್ಕೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಪರಶುರಾಮ ಮೂರ್ತಿ ಬಗ್ಗೆ ಕಾಂಗ್ರೆಸ್ ಅಪಪ್ರಚಾರಕ್ಕೆ ಸೋಲು: ಸುನಿಲ್
ಪರಶುರಾಮ ಥೀಮ್ ಪಾರ್ಕ್ ಹಾಗೂ ಅದರ ಪ್ರತಿಮೆಯ ಕುರಿತಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಅಪಪ್ರಚಾರಕ್ಕೆ ಪೊಲೀಸ್ ತನಿಖೆಯ ಬೆಳಕಿನಲ್ಲಿ ಸ್ಪಷ್ಟ ಸೋಲು ಕಂಡಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸೋಮವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, ಹಿತ್ತಾಳೆ ಬಳಸಿ ಮಾಡಲಾದ ಪ್ರತಿಮೆ ಫೈಬರ್‌ನಿಂದ ತಯಾರಿಸಲಾಗಿದೆ ಎಂಬುದಾಗಿ ಕಾಂಗ್ರೆಸ್ ವಕ್ತಾರರು ಮತ್ತು ಕೆಲ ಟೂಲ್ ಕಿಟ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಮಿತಿಮೀರಿ ಅಪಪ್ರಚಾರ ನಡೆಸಿದ್ದರು. ಈ ಆರೋಪಗಳ ಬಗ್ಗೆ ತನಿಖೆ ನಡೆಸಿದ ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ, ಪರಶುರಾಮನ ಪ್ರತಿಮೆ ಹಿತ್ತಾಳೆಯಿಂದ ತಯಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸಕ್ಕಾಗಿ ತೆಗೆದು ಇಡಲಾಗಿದ್ದುದೆಂದು ತಿಳಿಸಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಈವರೆಗೂ ಅನುಮಾನವನ್ನು ಉಂಟುಮಾಡುತ್ತಿದ್ದ ಫೈಬರ್‌ದು ಎಂಬ ಸುಳ್ಳು ಮಾಹಿತಿ ಸಂಪೂರ್ಣವಾಗಿ ಮಸುಕಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಮ್ ಪಾರ್ಕ್‌ಗೆ ನಿಗದಿ ಮಾಡಿದ್ದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಪವಿತ್ರ ತಾಣವನ್ನು ಪ್ರವಾಸೋದ್ಯಮದ ನಕ್ಷೆಯಲ್ಲಿ ಪುನಃ ಸ್ಥಾಪಿಸಬೇಕು. ಅಭಿವೃದ್ಧಿಯ ವಿಷಯದಲ್ಲಿ ನಡೆಯುವ ದ್ವೇಷ ರಾಜಕಾರಣಕ್ಕೆ ತೆರೆ ಬೀಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.