ಕಾರವಾರ : ಕಾಳಿ ನದಿ ಹಳೆ ಸೇತುವೆ ಕುಸಿತ - ಹೊಸ ಸೇತುವೆಯಲ್ಲಿ ಎಲ್ಲಾ ವಾಹನ ಸಂಚಾರ ಶುರು

| Published : Aug 09 2024, 09:41 AM IST

kali river bridge collapse in karwar

ಸಾರಾಂಶ

ಕಾಳಿ ನದಿ ಹೊಸ ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಪರಿಶೀಲಿಸಿ, ಲಿಖಿತವಾಗಿ ವರದಿ ನೀಡಿದ ಆಧಾರದ ಮೇಲೆ ಭಾರಿ ವಾಹನಗಳ ಸಂಚಾರ ಆರಂಭಗೊಂಡಿದೆ.

ಕಾರವಾರ  :  ಕಾಳಿ ನದಿ ಹೊಸ ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಪರಿಶೀಲಿಸಿ, ಲಿಖಿತವಾಗಿ ವರದಿ ನೀಡಿದ ಆಧಾರದ ಮೇಲೆ ಭಾರಿ ವಾಹನಗಳ ಸಂಚಾರ ಆರಂಭಗೊಂಡಿದೆ.

ಹಳೆಯ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಆ ಸೇತುವೆಯ ಅವಶೇಷಗಳಿಂದ ಪಕ್ಕದಲ್ಲೇ ಇರುವ ಹೊಸ ಸೇತುವೆಗೆ ಹಾನಿ ಆಗಿರಬಹುದೆ ಎಂಬ ಶಂಕೆ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ಬುಧವಾರ ನಿರ್ಬಂಧಿಸಲಾಗಿತ್ತು.

ಹೆದ್ದಾರಿ ಪ್ರಾಧಿಕಾರದ ತಜ್ಞರು ಸ್ಥಳಕ್ಕೆ ಆಗಮಿಸಿ ಸೇತುವೆಯನ್ನು ಪರಿಶೀಲಿಸಿ ಸೇತುವೆ ಮೇಲೆ ವಾಹನಗಳ ಸಂಚಾರ ನಡೆಸಬಹುದು ಎಂದು ವರದಿ ನೀಡಿದ್ದರಿಂದ ಜಿಲ್ಲಾಧಿಕಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಸಂಚಾರಕ್ಕೆ ಅವಕಾಶ ಇಲ್ಲದೆ ಬುಧವಾರದಿಂದ ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಹೊಸ ಸೇತುವೆ ಮೇಲೆ ಈ ಹಿಂದೆ ಏಕಮುಕ ಸಂಚಾರ ಇತ್ತು. ಈಗ ದ್ವಿಮುಖ ಸಂಚಾರ ಆರಂಭವಾಗಿದೆ. ಬುಧವಾರ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲದೆ ಇದ್ದುದರಿಂದ ಸದಾಶಿವಗಡದಲ್ಲಿ ಇರುವ ಶಾಲಾ- ಕಾಲೇಜುಗಳಿಗೆ ತೆರಳುವ ಶಾಲಾ ವಾಹನಗಳು ಬರದೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವಂತಾಯಿತು.

ಸದ್ಯಕ್ಕೆ ಹೊಸ ಸೇತುವೆ ಭಾರಿ ವಾಹನಗಳ ಸಂಚಾರಕ್ಕೆ ಸಮರ್ಥವಾಗಿದೆ ಎಂದು ವರದಿ ಬಂದಿದ್ದರೂ ವಾಹನಗಳ ದಟ್ಟಣೆ ಹೆಚ್ಚುತ್ತಿರುವುದರಿಂದ ಇನ್ನೊಂದು ಸೇತುವೆಯನ್ನು ಶೀಘ್ರದಲ್ಲಿ ನಿರ್ಮಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.