ಸಾರಾಂಶ
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧದ ಕಾರ್ಯಾಚರಣೆಯಲ್ಲಿ ಬುಧವಾರ ಕೇರಳ ಮೂಲದ ಚಾಲಕ ಎನ್ನಲಾದ ಅರ್ಜುನನ ಶವ ಹಾಗೂ ಅವರು ಓಡಿಸುತ್ತಿದ್ದ ಭಾರತ ಬೆಂಜ್ ಲಾರಿ ಪತ್ತೆಯಾಗಿದೆ. ಆ ಮೂಲಕ 66 ದಿನಗಳ ಬಳಿಕ ಜಿಲ್ಲಾಡಳಿತಕ್ಕೆ ಕೊನೆಗೂ ದೊಡ್ಡ ಯಶಸ್ಸು ದೊರೆತಂತಾಗಿದೆ.
ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧದ ಕಾರ್ಯಾಚರಣೆಯಲ್ಲಿ ಬುಧವಾರ ಕೇರಳ ಮೂಲದ ಚಾಲಕ ಎನ್ನಲಾದ ಅರ್ಜುನನ ಶವ ಹಾಗೂ ಅವರು ಓಡಿಸುತ್ತಿದ್ದ ಭಾರತ ಬೆಂಜ್ ಲಾರಿ ಪತ್ತೆಯಾಗಿದೆ. ಆ ಮೂಲಕ 66 ದಿನಗಳ ಬಳಿಕ ಜಿಲ್ಲಾಡಳಿತಕ್ಕೆ ಕೊನೆಗೂ ದೊಡ್ಡ ಯಶಸ್ಸು ದೊರೆತಂತಾಗಿದೆ.
ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಶೋಧ ಕಾರ್ಯ ವೇಳೆ ಕ್ರೇನ್ ಮೂಲಕ ಬುಧವಾರ ಮಧ್ಯಾಹ್ನ ಬೆಂಜ್ ಲಾರಿಯನ್ನು ಮೇಲಕ್ಕೆತ್ತಿ, ಲಾರಿಯನ್ನು ದಡಕ್ಕೆ ತರಲಾಯಿತು. ಲಾರಿಯ ಕ್ಯಾಬಿನ್‌ನಲ್ಲಿಯೇ ಶವ ಪತ್ತೆಯಾಗಿದೆ. ಈ ಶವ ಅರ್ಜುನನದೆ ಎಂದು ಖಾತ್ರಿಪಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕವೇ ಅಧಿಕೃತವಾಗಿ ಘೋಷಣೆಯನ್ನು ಜಿಲ್ಲಾಡಳಿತ ಪ್ರಕಟಿಸಲಿದೆ.
ಘಟನೆಯ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿ, ಮುಂಭಾಗ ಅಪ್ಪಚ್ಚಿಯಾಗಿದೆ. ಅದೇ ಜಾಗದಲ್ಲಿ ಅರ್ಜುನನದ್ದು ಎನ್ನಲಾದ ಶವ ದೊರೆತಿದ್ದು, ಕೇವಲ ಜೀರ್ಣಾವಸ್ಥೆಯ ಮೂಳೆಗಳಿಗೆ ಅಂಟಿಕೊಂಡಿರುವ ಮಾಂಸದ ಮುದ್ದೆ ಮಾತ್ರ ಕಂಡು ಬಂದಿದೆ. ಲಾರಿಯ ಸ್ಥಿತಿ ಗಮನಿಸಿದಾಗ ಮಣ್ಣು ಕುಸಿದ ಕೆಲವೇ ನಿಮಿಷಗಳಲ್ಲಿ ಅರ್ಜುನ ಮೃತಪಟ್ಟಿರುವುದು ಗೋಚರಿಸುತ್ತಿದೆ.
ಜು.16ರಂದು ದಾಂಡೇಲಿಯಿಂದ ಕಟ್ಟಿಗೆ ತುಂಬಿಕೊಂಡು ಬಂದಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾದ ಶಿರೂರು ಸಮೀಪ ಚಹಾ ಅಂಗಡಿಯ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆಯುವಾಗ ಉಂಟಾದ ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಚಾಲಕ ಅರ್ಜುನ ಸಹ ಗಂಗಾವಳಿ ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಅಲ್ಲದೇ ಘಟನೆಯಲ್ಲಿ ಒಟ್ಟು 11 ಜನರು ನಾಪತ್ತೆಯಾಗಿದ್ದರು. ಆ ಪೈಕಿ ಬುಧವಾರದ ಶವ ಸೇರಿದಂತೆ ಇಲ್ಲಿಯವರೆಗೆ 9 ಜನರ ಶವಗಳು ಪತ್ತೆಯಾಗಿವೆ. ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಯಲಿದೆ.
ಲಾರಿ ಚಾಲಕನ ಶವ ಹೊತ್ತು ಸಾಗಿಸಿದ ಪಿಎಸ್‌ಐ:
ಲಾರಿ ಚಾಲಕನ ಶವವನ್ನು ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ ನಾಯ್ಕ, ಅನಿಲ ಮಹಾಲೆ ಕನಸಿಗದ್ದೆ, ಬೊಮ್ಮಯ್ಯ ನಾಯ್ಕ ಅವರು ಹೊತ್ತು ಸಾಗಿಸಿದ್ದಾರೆ. ಲಾರಿ ಚಾಲಕನ ಮೃತದೇಹ ಬಹುದಿನಗಳ ನಂತರ ಪತ್ತೆಯಾಗಿದ್ದರಿಂದ ಶವ ತೀವ್ರ ದುರ್ನಾತ ಬೀರುತ್ತಿತ್ತು. ಹಾಗಾಗಿ, ನದಿಯ ತಟದಿಂದ ಆ್ಯಂಬುಲೆನ್ಸ್‌ಗೆ ಸಾಗಿಸಲು ಯಾರು ಮುಂದೆ ಬರಲಿಲ್ಲ. ಈ ವೇಳೆ ಪಿಎಸ್‌ಐ ಸೇರಿ ನಾಲ್ವರು ರಾಷ್ಟ್ರೀಯ ಹೆದ್ದಾರಿಯವರೆಗೆ (ಸುಮಾರು 200 ಮೀ) ಶವವನ್ನು ಹೊತ್ತು ಸಾಗಿ ಆ್ಯಂಬುಲೆನ್ಸ್‌ನಲ್ಲಿ ಇಟ್ಟಿದ್ದಾರೆ.