ಜಯ ನಮ್ಮದೇ, ದಾಖಲೆ ಮತದ ಅಂತರದಿಂದ ಗೆಲ್ಲುವೆ : ಕಾಗೇರಿ

| Published : May 03 2024, 11:31 AM IST

Vishweshwar hegde kageri
ಜಯ ನಮ್ಮದೇ, ದಾಖಲೆ ಮತದ ಅಂತರದಿಂದ ಗೆಲ್ಲುವೆ : ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್‌ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ವಸಂತಕುಮಾರ್ ಕತಗಾಲ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್‌ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆರು ಬಾರಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಅವರನ್ನು ಕೈಬಿಟ್ಟ ಪಕ್ಷ ಈ ಬಾರಿ ವಿಧಾನಸಭೆಯ ಮಾಜಿ ಅಧ್ಯಕ್ಷ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಲೋಕಸಭಾ ಚುನಾವಣೆಗೆ ಪರಿಗಣಿಸಿ ಕಣಕ್ಕಿಳಿಸಿದೆ. ಸಜ್ಜನ ರಾಜಕಾರಣಿ ಎಂದು ಗುರುತಿಸಲ್ಪಡುವ ಕಾಗೇರಿ ಅವರು ಬಿರುಸಿನ ಪ್ರಚಾರದ ನಡುವೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

*ಈ ಚುನಾವಣೆಯಲ್ಲಿ ನಿಮ್ಮ ಅಜೆಂಡಾ ಏನು?

-ರಾಷ್ಟ್ರೀಯತೆ ಹಾಗೂ ಕ್ಷೇತ್ರದ ಅಭಿವೃದ್ಧಿ ಇವೆರಡೂ ನನ್ನ ಎರಡೂ ಕಣ್ಣುಗಳಿದ್ದ ಹಾಗೆ. ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಎರಡಕ್ಕೂ ಆದ್ಯತೆ ನೀಡುತ್ತೇನೆ. ಚುನಾವಣಾ ಪ್ರಣಾಳಿಕೆಯನ್ನು ಕೊಟ್ಟಿದ್ದೇವೆ. ಪಕ್ಷದ ತತ್ವ, ಸಿದ್ಧಾಂತದ ಹಿನ್ನೆಲೆಯಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿದ್ದೇವೆ. ಆ ಎಲ್ಲ ಅಂಶಗಳೊಂದಿಗೆ ಪಕ್ಷ ಚುನಾವಣೆಯನ್ನು ಎದುರಿಸುತ್ತಿದೆ.

*ನಿಮ್ಮ ಎದುರಾಳಿ ಅಂಜಲಿ ನಿಂಬಾಳ್ಕರ್ ಅಥವಾ ಕಾಂಗ್ರೆಸ್ ಗ್ಯಾರಂಟಿಯೇ?

-ಇದು ಎರಡು ಅಭ್ಯರ್ಥಿಗಳ ನಡುವೆ ನಡೆಯುವ ಚುನಾವಣೆ ಎನ್ನುವುದಕ್ಕಿಂತ ಎರಡು ತತ್ವ ಸಿದ್ಧಾಂತಗಳ ನಡುವೆ ನಡೆಯುತ್ತಿರುವ ಚುನಾವಣೆ. ಭ್ರಷ್ಟಾಚಾರ, ಓಲೈಕೆ, ಅಪರಾಧೀಕರಣಕ್ಕೆ ಪ್ರೋತ್ಸಾಹ ನೀಡುವುದು ಕಾಂಗ್ರೆಸ್‌ನ ಆಡಳಿತದ ವೈಖರಿ. ನಮ್ಮದು ಅಭಿವೃದ್ಧಿಪರ, ಭ್ರಷ್ಟಾಚಾರ ಇಲ್ಲದ ಪಾರದರ್ಶಕ ಆಡಳಿತ. ರಾಷ್ಟ್ರೀಯತೆ ಹಾಗೂ ಅರಾಷ್ಟ್ರೀಯತೆ ನಡುವೆ ನಡೆಯುವ ಚುನಾವಣೆ. ಇಲ್ಲಿ ಅಭ್ಯರ್ಥಿಗಿಂತ ಸಿದ್ಧಾಂತಕ್ಕಾಗಿ ಹೋರಾಟ ನಡೆಯುತ್ತಿದೆ. ಜನತೆ ಇದನ್ನೆಲ್ಲ ಗಮನಿಸುತ್ತಾರೆ.

*ನಿಮ್ಮ ಸ್ಪರ್ಧೆಗೆ ಪೂರಕ ಅಂಶಗಳೇನು?

-ಪ್ರಧಾನಿ ನರೇಂದ್ರ ಮೋದಿ 10 ವರ್ಷಗಳಿಂದ ಮಾಡಿರುವ ಸಾಧನೆ ನನ್ನ ಗೆಲುವಿಗೆ ಮುಖ್ಯ ಕಾರಣವಾಗಲಿದೆ. ಬಿಜೆಪಿ ಬಗ್ಗೆ ಮತದಾರರ ಒಲವು ಹೆಚ್ಚಾಗುತ್ತಿರುವುದು ಮೋದಿ ಅವರ ಶಿರಸಿಯಲ್ಲಿನ ಸಭೆಯೇ ಸ್ಪಷ್ಟ ನಿದರ್ಶನವಾಗಿದೆ. ಪಕ್ಷದ ಸಂಘಟನಾತ್ಮಕ ಸಿದ್ಧತೆ ತುಂಬ ಚೆನ್ನಾಗಿದೆ. ಕಳೆದ ಒಂದು ವರ್ಷದಿಂದ ಪ್ರತಿ ಬೂತ್ ಹಂತದಲ್ಲಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಂತದಲ್ಲಿ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಿದ್ದೇವೆ. ಎಲ್ಲ ಚಟುವಟಿಕೆಗಳು ಸ್ಪರ್ಧೆಗೆ ಪೂರಕವಾಗಿದೆ.

*ಜೆಡಿಎಸ್ ಜತೆ ಹೊಂದಾಣಿಕೆ ಹೇಗಿದೆ?

-ಜೆಡಿಎಸ್ ಹೊಂದಾಣಿಕ ಇನ್ನು ಬಲ ತಂದಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಮುಂದಾಗಿ ಪ್ರಚಾರ ಮಾಡುತ್ತಿದ್ದಾರೆ. ಉಭಯ ಪಕ್ಷಗಳೂ ಹಾಲು ಜೇನಿನಂತೆ ಕೂಡಿಕೊಂಡು ಪ್ರಚಾರ ನಡೆಸುತ್ತಿದ್ದೇವೆ. ಬೂತ್ ಹಂತದಲ್ಲೂ ಜಂಟಿ ಪ್ರಚಾರ ನಡೆಯುತ್ತಿದೆ. ನಿಶ್ಚಿತವಾಗಿ ಗೆಲುವು ನಮ್ಮದೇ ಎಂಬ ವಿಶ್ವಾಸ ಇದೆ.

*ಸಂಸದ ಅನಂತಕುಮಾರ್ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ್ ನಡೆಯಿಂದ ಚುನಾವಣೆಯಲ್ಲಿ ಯಾವ ಪರಿಣಾಮ

ಆಗಲಿದೆ?

-ಮತದಾರರು ಪ್ರಬುದ್ಧರಿದ್ದಾರೆ. ಕಾರ್ಯಕರ್ತರೂ ಜವಾಬ್ದಾರಿ ಉಳ್ಳವರು. ಶಿವರಾಮ ಹೆಬ್ಬಾರ್ ಅವರು ಏನು, ಹೇಗೆ ಎಂದು ಜನರೇ ನೋಡಿ ನಿರ್ಧರಿಸುತ್ತಿದ್ದಾರೆ. ಅನಂತಕುಮಾರ ಹೆಗಡೆ ಪ್ರಚಾರಕ್ಕೆ ಬರುವ ನಿರೀಕ್ಷೆ ಇದೆ.

*ನರೇಂದ್ರ ಮೋದಿ ಶಿರಸಿಗೆ ಬಂದು ಪ್ರಚಾರ ಮಾಡಿದ್ದರ ಪರಿಣಾಮ ಏನಾಗಿದೆ?

-ಕಾರ್ಯಕರ್ತರಿಗೆ, ಅಲ್ಲಿ ಸೇರಿರುವ ಜನರಿಗೆ, ಮತದಾರರಿಗೆ ವಿಶ್ವಾಸ ಹೆಚ್ಚಾಗಿದೆ. ಮೋದಿ ಸ್ವತಃ ಬಂದು ಅದ್ಭುತ, ಪ್ರೇರಣಾದಾಯಕ ಭಾಷಣದಿಂದ ಕಾರ್ಯಕರ್ತರಲ್ಲಿ ಶಕ್ತಿ, ಉತ್ಸಾಹ ಹೆಚ್ಚಿದೆ. ದಾಖಲೆ ಮತಗಳ ಅಂತರದ ಗೆಲುವಿಗೆ ಸಹಾಯವಾಗಲಿದೆ.

*ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಿದ್ದಾರಲ್ಲ. ಇದು ತೊಡಕಾದೀತೆ?

-ಒಂದು ವರ್ಷದ ಕಾಂಗ್ರೆಸ್ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಗ್ಯಾರಂಟಿ ಫಲಪ್ರದವಾಗುತ್ತಿಲ್ಲ. ಬೆಲೆ ಏರಿಕೆ ಸಿಕ್ಕಾಪಟ್ಟೆ ಆಗಿದೆ. ಒಂದು ಕಡೆ ಗ್ಯಾರಂಟಿಗಳನ್ನು ಕೊಟ್ಟು ಇನ್ನೊಂದೆಡೆ ಬೆಲೆ ಏರಿಕೆಯಿಂದ ಜನ ಕಷ್ಟ ಪಡುತ್ತಿದ್ದಾರೆ. ಇದರಿಂದ ಜನರಿಗೆ ಭ್ರಮನಿರಸನವಾಗಿದೆ. ಜನತೆಯ ಈ ಬೇಸರ, ಆಕ್ರೋಶದ ಮತವೂ ಬಿಜೆಪಿಗೆ ಬರಲಿದೆ. ಇದು ಶಾಸಕರ ಚುನಾವಣೆ ಅಲ್ಲ. ಲೋಕಸಭೆ ಚುನಾವಣೆ. ಹಾಗಾಗಿ ಯಾವುದೇ ಸಮಸ್ಯೆ ಆಗದು.

*ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವಿರುದ್ಧ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚಿದೆಯಲ್ಲ?

-ಸಾಮಾಜಿಕ ಜಾಲತಾಣ ಅಥವಾ ಬೇರೆ ಕಡೆಗಳಲ್ಲಿ ಬಂದಿದ್ದು ಸತ್ಯವೋ ಮಿಥ್ಯವೋ ಎಂದು ವಿಶ್ಲೇಷಿಸುವ ಶಕ್ತಿ ಜನತೆಗಿದೆ. ಅಪಪ್ರಚಾರ ನಡೆಸುತ್ತಿರುವುದು ನಿಜ. ಜನರಿಗೆ ಹತ್ತಿರವಾಗಿರುವ ನನಗೆ ಯಾವ ಅಪಪ್ರಚಾರವೂ ಪರಿಣಾಮ ಬೀರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದನ್ನು ಜನತೆ ತುಲನೆ ಮಾಡುತ್ತಾರೆ. ಮತದಾರರಿಗೆ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡುವ ಶಕ್ತಿ ಇದೆ. ಅಪಪ್ರಚಾರವನ್ನು ಎದುರಿಸುತ್ತೇವೆ. ಕಾರ್ಯಕರ್ತರು ಮತದಾರರಿಗೆ ಸ್ಪಷ್ಟತೆ ಇದೆ.

*ಜನತೆ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು?

-ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಜನರ ಭಾವನೆ ಗೌರವಿಸುತ್ತೇನೆ. ಎಲ್ಲರೊಂದಿಗೆ ಸ್ಪಂದಿಸುತ್ತೇನೆ. ಜನತೆಗೆ ನ್ಯಾಯ ದೊರಕಿಸಿಕೊಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಕಾಂಗ್ರೆಸ್ 60 ವರ್ಷಗಳಲ್ಲಿ ಜನರಿಗೆ, ಜಿಲ್ಲೆಗೆ ಅನ್ಯಾಯ ಮಾಡಿದೆ. ಅದರಿಂದ ಕಷ್ಟ ಅನುಭವಿಸುತ್ತಿದ್ದೇವೆ. ಅದಕ್ಕೆ ಪರಿಹಾರ ದೊರಕಿಸಿಕೊಡುತ್ತೇನೆ. ಜನತೆಯನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ 60 ವರ್ಷ ಕಾಂಗ್ರೆಸ್ ಆಡಳಿತದಲ್ಲಿತ್ತು. ಬಿಜೆಪಿ ಕೇವಲ 9 ವರ್ಷ ಅಧಿಕಾರದಲ್ಲಿತ್ತು. ಹೀಗಾಗಿ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಕಾರಣವಾಗಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ. ವಿಮಾನ ನಿಲ್ದಾಣ, ಅರಣ್ಯ ಅತಿಕ್ರಮದಾರರ ಸಮಸ್ಯೆ, ಹಾಲಕ್ಕಿ, ಕುಣಬಿ ಪರಿಶಿಷ್ಟ ಪಂಗಡಕ್ಕ ಸೇರಿಸುವುದು, ಮೀನುಗಾರರ ಸಮಸ್ಯೆ, ಕೃಷಿ, ರೈತರ ಸಮಸ್ಯೆ, ಸಾಮಾಜಿಕ ಸಮಸ್ಯೆ ಎಲ್ಲ ಪರಿಹರಿಸಿ ಸಮಗ್ರವಾಗಿ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ.

*ಮತದಾರರಿಗೆ ನಿಮ್ಮ ಸಂದೇಶ ಏನು?

-ನರೇಂದ್ರ ಮೋದಿ ಅವರ 10 ವರ್ಷದ ಸಾಧನೆ ಅತ್ಯದ್ಭುತವಾದುದು. ಇದು ದೇಶಕ್ಕೆ ಘನತೆ ಗೌರವ ತಂದಿದೆ. ಜಗತ್ತಿನ ನಾಯಕ ಆಗಲು ನರೇಂದ್ರ ಮೋದಿ ಅರ್ಹರು ಎಂದು ಸಾಬೀತಾಗಿದೆ. ಮೋದಿ ಸಾಮಾನ್ಯ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ರಾಷ್ಟ್ರೀಯತೆಗೆ ಬದ್ಧತೆ ತೋರಿಸಿದ್ದಾರೆ. ಇದೆಲ್ಲ ಮುಂದುವರಿಯಲಿದೆ. ಆ ವಿಶ್ವಾಸದಲ್ಲಿ ಮತದಾರರು ನನ್ನನ್ನು ಗೆಲ್ಲಿಸುವಂತೆ ವಿನಂತಿಸುತ್ತೇನೆ.

- - -