ಮಂಗನಕಾಯಿಲೆಗೆ ವರ್ಷದೊಳಗೆ ವ್ಯಾಕ್ಸಿನ್: ದಿನೇಶ್ ಗುಂಡೂರಾವ್

| Published : Feb 11 2024, 01:46 AM IST

ಸಾರಾಂಶ

ಹೊಸ ವ್ಯಾಕ್ಸಿನ್‌ಗೆ ಐಸಿಎಂಆರ್ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆಯೊಂದು ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ (ಕ್ಯಾಸನೂರ್ ಫಾರೆಸ್ಟ್ ಡಿಸಿಸ್)ಗೆ ಹೊಸ ವ್ಯಾಕ್ಸಿನ್ ತಯಾರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಡುಪಿಯಲ್ಲಿ ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಕೆಎಫ್‌ಡಿ ಬಾಧಿತ ಜಿಲ್ಲೆಗಳ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈಗಿರುವ ವ್ಯಾಕ್ಸಿನ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಹೊಸ ವ್ಯಾಕ್ಸಿನ್‌ಗೆ ಐಸಿಎಂಆರ್ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆಯೊಂದು ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದವರು ಭರವಸೆ ವ್ಯಕ್ತಪಡಿಸಿದರು.

* ಎಬಿಎಆರ್‌ಕೆಯಲ್ಲಿ ಚಿಕಿತ್ಸೆ

ಮಂಗನ ಕಾಯಿಲೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಈ ಕಾಯಿಲೆ ಬಂದವರನ್ನು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

* ಮೃತರ ಕುಟುಂಬಕ್ಕೆ ಪರಿಹಾರ

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿದ್ದು, ಇದುವರೆಗೆ ಒಟ್ಟು 70 ಪ್ರಕರಣ ದಾಖಲಾಗಿದೆ. ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತ್ತವರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು.

ಮಂಗನ ಕಾಯಿಲೆ ಹರಡುವ ಉಣ್ಣಿ ಕಡಿತವನ್ನು ತಡೆಗಟ್ಟಲು ಬಳಸಲಾಗುವ ಡಿಅಪಿಎ ತೈಲವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗಿದೆ. ಈವರೆಗೆ 62794 ಬಾಟಲ್ ತೈಲವನ್ನು ವಿತರಿಲಾಗಿದೆ ಎಂದರು.

* ಶಿವಮೊಗ್ಗ, ಮಣಿಪಾಲದಲ್ಲಿ ಪರೀಕ್ಷೆ

ಶಿವಮೊಗ್ಗದ ವಿಆರ್‌ಡಿಎಲ್ (ವೈರಸ್ ರಿಸರ್ಚ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬೋರೆಟರಿ) ಮತ್ತು ಮಣಿಪಾಲದ ಎಂಐವಿ (ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ)ಗಳನ್ನು ಮಂಗನ ಕಾಯಿಲೆ ರೋಗಿಗಳ ಪರೀಕ್ಷೆಗೆ ಗುರುತಿಸಲಾಗಿದೆ. ಮಂಗನಕಾಯಿಲೆ ರೋಗಿಗಳಿಗಾಗಿಯೇ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಿಗಳ ಚಿಕಿತ್ಸೆಗಾಗಿಯೇ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಟೆಲಿ-ಐಸಿಯು ಸೇವೆಯನ್ನು ಒದಗಿಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಆರೋಗ್ಯ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್., ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ ಉಪಸ್ಥಿತರಿದ್ದರು.